ಶ್ರೀನಗರ: ಮೂರು ದಶಕಗಳ ಹಿಂದೆ ನಿವೃತ್ತ ನ್ಯಾಯಮೂರ್ತಿ ನೀಲಕಂಠ ಗಂಜೂ ಅವರ ಹತ್ಯೆಯ ಹಿಂದಿನ ದೊಡ್ಡ ಕ್ರಿಮಿನಲ್ ಪಿತೂರಿಯನ್ನು ಬಯಲಿಗೆಳೆಯುವ ಸಲುವಾಗಿ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ), ಈ ಕೊಲೆ ಪ್ರಕರಣದ ಸತ್ಯ ಅಥವಾ ಸಂದರ್ಭಗಳ ಪರಿಚಯವಿರುವ ಎಲ್ಲ ವ್ಯಕ್ತಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದೆ. ತತ್‌ಕ್ಷಣದ ಪ್ರಕರಣದ ತನಿಖೆಯ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಘಟನೆಗಳ ಯಾವುದೇ ವಿವರಗಳನ್ನು ಹಂಚಿಕೊಳ್ಳಲು ಮುಂದೆ ಬರುವಂತೆ ಹೇಳಿದೆ.
ಅಂತಹ ಎಲ್ಲಾ ವ್ಯಕ್ತಿಗಳ ಗುರುತನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಮತ್ತು ಎಲ್ಲಾ ಉಪಯುಕ್ತ ಮತ್ತು ಸಂಬಂಧಿತ ಮಾಹಿತಿಗಳನ್ನು ಸೂಕ್ತವಾಗಿ ಪುರಸ್ಕರಿಸಲಾಗುವುದು ಎಂದು ಪ್ರಕಟಣೆಯು ತಿಳಿಸಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಸಾರ್ವಜನಿಕರು 8899004976 ಅಥವಾ ಇಮೇಲ್ [email protected] ನಲ್ಲಿ ಸಂಪರ್ಕಿಸಲು ಕೋರಲಾಗಿದೆ.
1989 ರಲ್ಲಿ ಯಾಸಿನ್ ಮಲಿಕ್‌ನ ಜೆಕೆಎಲ್‌ಎಫ್ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ನ್ಯಾಯಮೂರ್ತಿ ನೀಲಕಂಠ ಗಂಜೂ ಅವರ ಪ್ರಕರಣವನ್ನು ಮೂವತ್ತ ಮೂರು ವರ್ಷಗಳ ಬಳಿಕ ಪುನಃ ತೆರೆಯಲಾಗಿದೆ. 1960 ರ ದಶಕದಲ್ಲಿ ಪೊಲೀಸ್ ಅಧಿಕಾರಿ ಅಮರ್ ಚಂದ್ ಅವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಗಂಜೂ ಅವರು ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಸಂಸ್ಥಾಪಕ ಮೊಹಮ್ಮದ್ ಮಕ್ಬೂಲ್ ಭಟ್ ಅವರಿಗೆ ಮರಣದಂಡನೆ ವಿಧಿಸಿದ್ದರು. ಗಂಜೂ ಅವರನ್ನು ನವೆಂಬರ್ 1989 ರಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ ಕೊಲೆ ಮಾಡಿದ್ದರು. ಗಂಜೂ ಕಣಿವೆಯ ಪ್ರಮುಖ ಕಾಶ್ಮೀರಿ ಪಂಡಿತರಲ್ಲಿ ಒಬ್ಬರಾಗಿದ್ದರು.












