ಜಿಲ್ಲೆಯಲ್ಲಿ ತ್ವರಿತ ಅಂಗವಿಕಲತೆ ಪತ್ತೆ ಕೇಂದ್ರ ಸ್ಥಾಪನೆ: ಬಸವರಾಜ್

ಉಡುಪಿ: ಜಿಲ್ಲೆಯಲ್ಲಿ, ಶೀಘ್ರದಲ್ಲಿ ಅಂಗವಿಕಲತೆಯನ್ನು ಪತ್ತೆ ಹಚ್ಚುವ ಕೇಂದ್ರವನ್ನು
ಪ್ರಾರಂಭಿಸಲಾಗುವುದು ಎಂದು ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ಬಸವರಾಜ್ ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಕ್ಕಳಲ್ಲಿನ ವಿವಿಧ ರೀತಿಯ ಅಂಗವಿಕಲತೆಯನ್ನು ಪತ್ತೆ ಹಚ್ಚಲು ಪೋಷಕರು ಹಲವು
ವೈದ್ಯರನ್ನು ಸಂದರ್ಶಿಸಬೇಕಾಗಿದೆ ಅಲ್ಲದೇ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಹ
ಬಹಳ ಕಡೆ ತೆರಳಬೇಕಾಗಿದೆ ಇದನ್ನು ತಪ್ಪಿಸುವ ಸಲುವಾಗಿ, ಒಂದೇ ಕಡೆಯಲ್ಲಿ ಎಲ್ಲಾ ವಿಧದ ತಜ್ಞ ವೈದ್ಯರನ್ನು ಒಳಗೊಂಡ ಶೀಘ್ರ ಅಂಗವಿಕಲತೆ ಪತ್ತೆ ಹಚ್ಚುವ ಕೇಂದ್ರವನ್ನು
ಉಡುಪಿಯಲ್ಲಿ ಆರಂಭಿಸಲಾಗುವುದು ಎಂದು ಬಸವರಾಜ್ ಹೇಳಿದರು.

ಈ ಕೇಂದ್ರದಲ್ಲಿ ಮಕ್ಕಳ ತಜ್ಞರು, ಮೂಳೆ ತಜ್ಞರು, ವಾಕ್ ಶ್ರವಣ ದೋಷ ಪತ್ತೆ ತಜ್ಞರು,
ಫಿಸಿಯೋಥೆರಪಿ ತಜ್ಞರು, ಮನ:ಶಾಸ್ತ್ರಜ್ಞರು ಇರಲಿದ್ದು, ಕೇಂದ್ರಕ್ಕೆ ಬರುವ ಮಗುವಿನ
ಅಂಗವಿಕಲತೆಯನ್ನು ಪತ್ತೆ ಹಚ್ಚಿ ಮಗುವಿಗೆ ನೀಡಬೇಕಾದ ಅಗತ್ಯ ಚಿಕಿತ್ಸೆ ಮತ್ತು
ತರಬೇತಿ ಮತ್ತು ಪೋಷಕರಿಗೆ ಅಗತ್ಯ ಸಲಹೆಯನ್ನು ನೀಡಲಾಗುವುದು , ಈ ಕೇಂದ್ರವನ್ನು
ಉಡುಪಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ತರೆಯಲು ನಿರ್ಧರಿಸಲಾಗಿದೆ ಎಂದು ಆಯುಕ್ತರು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 16000 ಮಂದಿ ಅಂಗವಿಕಲರಿದ್ದು, ಅಂಗವಿಕಲತೆಯನ್ನು ಗುರುತಿಸುವ ಮಾನದಂಡ ಪ್ರಸ್ತುತ ಬದಲಾಗಿದ್ದು ಇದರಿಂದಾಗಿ ಸುಮಾರು 25000 ಮಂದಿ ಉಡುಪಿ ಜಿಲ್ಲೆಯಲ್ಲಿ ಇರಬಹುದು, ಪ್ರತಿ ಇಲಾಖೆಯಲ್ಲಿ ವಿಕಲಚೇತನರಿಗಾಗಿ ಕಾರ್ಯಕ್ರಮಗಳಿದ್ದು, ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು, ಈ ಕುರಿತಂತೆ ಇಂದು ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ರಾಜ್ಯ ಅಂಗವಿಕಲರ ಅಧಿನಿಯಮದ ಸಹಾಯಕ ಆಯುಕ್ತ ಪದ್ಮನಾಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಉಪಸ್ಥಿತರಿದ್ದರು.