ಉಡುಪಿ:- ಜಿಲ್ಲೆಯಲ್ಲಿ ಫೆಬ್ರವರಿ 8 ರಂದು ರಾಷ್ಟ್ರೀಯ ಜಂತಹುಳು ನಿವಾರಣಾ ದಿನಾಚರಣೆ ಆಚರಿಸಲಾಗುತ್ತಿದ್ದು, 1 ರಿಂದ 19 ವರ್ಷದೊಳಗಿನ ಒಟ್ಟು 3,08,070 ಮಂದಿಗೆ ಜಂತುಹುಳು ನಿವಾರಣೆಯ ಆಲ್ಬೆಂಡಝೋಲ್ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಪೌಷ್ಠಿಕಾಂಶದಿಂದ ಕೂಡಿದ ಆಹಾರವನ್ನು ಸೇವಿಸಿದರೂ ಸಹ ಜಂತುಹುಳುಗಳ ಬಾಧೆಯಿಂದ ಮಕ್ಕಳಲ್ಲಿ ಅಪೌಷ್ಠಿಕತೆ ಹಾಗೂ ರಕ್ತಹೀನತೆ ಉಂಟಾಗಿ ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುವುದರಿಂದ, ಬೆಳವಣಿಗೆ ಕುಂಠಿತಗೊಳ್ಳಲಿದೆ, ಆದ್ದರಿಂದ ಜಿಲ್ಲೆಯಲ್ಲಿನ 1 ರಿಂದ 19 ವರ್ಷದೊಳಗಿನ ಎಲ್ಲರಿಗೂ ಜಂತುಹುಳು ನಾಶಪಡಿಸುವ ಆಲ್ಬೆಂಡಝೋಲ್ ಮಾತ್ರೆಗಳನ್ನು ವಿತರಿಸಲಾಗುವುದು, 1-2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ, 2-19 ವರ್ಷದೊಳಗಿನವರಿಗೆ ಒಂದು ಮಾತ್ರೆ ವಿತರಿಸಲಾಗುವುದು ಎಂದು ಡಿಸಿ ತಿಳಿಸಿದರು.
ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳಿಗೆ, ಐ.ಟಿ.ಐ, ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಯ ವಿದ್ಯಾರ್ಥಿಗಳಿಗೆ, ಪಿಯು ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳಿಗೆ ಮಾತ್ರೆ ವಿತರಿಸುವಂತೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳು ಜಂತುಹುಳು ಮಾತ್ರೆಯಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಂತುಹುಳು ನಿವಾರಣಾ ಮಾತ್ರೆ ವಿತರಣಾ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡುವಂತೆ ರೋಟರಿ ಮತ್ತು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ಡಿಹೆಚ್ಓ ಡಾ. ರೋಹಿಣಿ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಸತೀಶ್ಚಂದ್ರ, ವಿವಿಧ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ReplyForward
|