ಜಿಲ್ಲೆಯ ವಿಕಲಚೇತನರಿಗೆ ದೊರೆಯಲಿದೆ ಕೃತಕ ‘ಆವಯವ’

ಉಡುಪಿ, ಮೇ 7 : ಉಡುಪಿ ಜಿಲ್ಲೆಯಲ್ಲಿನ ವಿಕಲಚೇತನರು ಕೃತಕ ಆವಯವಗಳ ಹುಡುಕಾಟಕ್ಕೆ ಶ್ರಮ ಪಡಬೇಕಿಲ್ಲ, ಖಾಸಗಿಯಲ್ಲಿ ದುಬಾರಿ ದರ ತೆರುವ ಅವಶ್ಯಕತೆಯಿಲ್ಲ, ವಿಕಲಚೇತನರು ಸಾಮಾನ್ಯರಂತೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಅನುಕೂಲವಾಗುವಂತ ಕೃತಕ ಆವಯವಗಳು ಇನ್ನು  ಉಡುಪಿ ಯಲ್ಲಿಯೇ ದೊರೆಯಲಿದೆ.  ಪ್ರಸ್ತುತ ಉಡುಪಿ ರೆಡ್ ಕ್ರಾಸ್ ಭವನದಲ್ಲಿ ಈ ಕೃತಕ ಆವಯವ ತಯಾರಿಕೆ ಮತ್ತು ಜೋಡಣಾ ಕೇಂದ್ರ ಮೇ 8 ರಿಂದ ಪ್ರಾರಂಭವಾಗಲಿದೆ.

ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಆರಂಭವಾಗಿರುವ ಈ ಕೇಂದ್ರದಲ್ಲಿ ಮೊದಲ ಹಂತದಲ್ಲಿ ಕಾಲಿಗೆ ಸಂಬಂದಿಸಿದ ಕೃತಕ ಆವಯವಗಳ ತಯಾರಿಕೆ ಮತ್ತು ಜೋಡಣೆ ನಡೆಯುತ್ತಿದೆ, ಈ ಆವಯವಗಳನ್ನು ಜೋಡಣೆಗೆ ಮುಂಚೆ ಅವುಗಳನ್ನು ಬಳಕೆ ಬಗ್ಗೆ ಫಲಾನುಭವಿಗಳಿಗೆ ಸೂಕ್ತ ತರಬೇತಿ ನೀಡಿ ನಂತರ ಅವುಗಳನ್ನು ಜೋಡಿಸಲಾಗುವುದು ಇದರಿಂದ ವಿಕಲಚೇತನರು ಸಾಮಾನ್ಯರಂತೆ ಓಡಾಡಲು ಮತ್ತು ದೈನಂದಿನ ತಮ್ಮ ಕೆಲಸಗಳನ್ನು ಯಾರ ನೆರವೂ ಇಲ್ಲದೇ ಮಾಡಿಕೊಳ್ಳಲು ನೆರವಾಗಲಿದೆ.

ಈ ಕೇಂದ್ರದಲ್ಲಿ ಉಡುಪಿ ಜಿಲ್ಲೆಯ ವಿಕಲಚೇತನರಿಗೆ ಮಾತ್ರ ಕೃತಕ ಆವಯವ ನೀಡಲಿದ್ದು, ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಂಪೂರ್ಣ ಉಚಿತವಾಗಿ ಮತ್ತು ಇನ್ನಿತರರಿಗೆ ರಿಯಾಯತಿ ದರದಲ್ಲಿ ಆವಯವಗಳನ್ನು ತಯಾರಿಸಿ ಕೊಡಲಾಗುವುದು. ಇದುವರೆಗೆ ಮಣಿಪಾಲದ ಕೆಎಂಸಿ , ಮಂಗಳೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ಮಾತ್ರ ಇಂತಹ ಆವಯವಗಳು  ದೊರೆಯುತ್ತಿದ್ದು, ಅವುಗಳ ದರ ಸಹ ದುಬಾರಿಯಾಗಿತ್ತು.

ಮೊಣಕಾಲು ಮಡಚಲು ಅಗತ್ಯವಿರುವ ಕೃತಕ ಕಾಲು, ಮೊಣಕಾಲು ನಿಂದ ಕೆಳಗೆ ಅಳವಡಿಸಬಹುದಾದ ಕೃತಕ ಕಾಲುಗಳನ್ನು ಪ್ರಸ್ತುತ ತಯಾರಿಸಲಾಗುತ್ತಿದ್ದು, ಈಗಾಗಲೇ 8 ಕಾಲುಗಳನ್ನು ತಯಾರಿಸಿದ್ದು, ಮೇ 8 ರಂದು ನಡೆಯುವ ವಿಶ್ವ ರೆಡ್‍ಕ್ರಾಸ್ ದಿನಾಚರಣೆಯಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಇವುಗಳನ್ನು ಫಲಾನುಭವಿಗಳಿಗೆ ವಿತರಿಸಲಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಮನೆ ಮನೆ ಬೇಟಿ ಮೂಲಕ ವಿಕಲಚೇತನರನ್ನು ಗುರುತಿಸುವ ಕೆಲಸ ಮಾಡಿದ್ದು, ಸುಮಾರು 17000 ವಿಕಲಚೇತರನ್ನು ಗುರುತಿಸಲಾಗಿದೆ, ಇವರಿಗೆ  ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ವಿವಿಧ ಸ್ವ ಉದ್ಯೋಗ ತರಬೇತಿಗಳು, ಪುರ್ನವಸತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ,  ಮುಂದಿನ ಹಂತದಲ್ಲಿ ಈ ಕೃತಕ ಆವಯವ ತಯಾರಿಕೆ ಮತ್ತು ಜೋಡಣಾ ಕೇಂದ್ರದಲ್ಲಿ,  ಕೈ, ಬೆನ್ನು ಸೇರಿದಂತೆ ದೇಹದ ಇತರೆ ಎಲ್ಲಾ ಭಾಗಗಳಿಗೆ  ಅಗತ್ಯವಿರುವ  ಕೃತಕ ಆವಯವ ತಯಾರಿಸಲು ಈ ಕೇಂದ್ರವನ್ನು 80 ಲಕ್ಷ ರೂ ವೆಚ್ಚದಲ್ಲಿ ಉನ್ನತೀಕರಿಸಲಾಗುವುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನ್ಯಾಶನಲ್ ಹೆಡ್‍ಕ್ವಾಟರ್ಸ್, ನವದೆಹಲಿಯ  ಮ್ಯಾನೆಜಿಂಗ್ ಕಮಿಟಿ ಮೆಂಬರ್ ಬಸ್ರೂರು ರಾಜೀವ್ ಶೆಟ್ಟಿ  ತಿಳಿಸಿದರು.

ಈ ಕೃತಕ ಅವಯವ ತಯಾರಿಕಾ ಕೇಂದ್ರದಲ್ಲಿ , ಈ ಹಿಂದೆ ಕೆಎಂಸಿ ಯಲ್ಲಿ ಕೃತಕ ಆವಯವ ತಯಾರಿಕೆಯಲ್ಲಿ ಅಪಾರ ಅನುಭವ ಹೊಂದಿ, ನಿವೃತ್ತರಾಗಿರುವ,  ಕೃತಕ ಆವಯವ ತಯಾರಿಕಾ ಇಂಜಿನಿಯರ್ ಸತೀಶನ್ ಮತ್ತು ಪದ್ಮನಾಭ ಆಚಾರ್ಯ ಕಾರ್ಯ ನಿರ್ವಹಿಸಲಿದ್ದು, ಆಯಯವ ತಯಾರಿಕೆಗೆ ಅಗತ್ಯವಿದ್ದ ಕಚ್ಚಾ ವಸ್ತು ಮತ್ತು ಬಿಡಿಭಾಗಗಳು ಪೂನಾದಿಂದ ಕಡಿಮೆ ದರದಲ್ಲಿ ಸರಬರಾಜಾಗಲಿವೆ.