ಉಡುಪಿ: ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ
ಜಿಲ್ಲಾಡಳಿತವು ಹಳ್ಳಿಗೆ ಭೇಟಿ ನೀಡಿದೆ. ಜನರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ಹೆಬ್ರಿ ತಾಲೂಕಿನ ವರಂಗ ಗ್ರಾಮ ವ್ಯಾಪ್ತಿಯ ಮುನಿಯಾಲಿನ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಗರದಿಂದ ದೂರವಿರುವ ಗ್ರಾಮೀಣ ಪ್ರದೇಶದ ಜನರು ವಾಸವಾಗಿರುವ ಸ್ಥಳಕ್ಕೆ ಅಧಿಕಾರಿಗಳು ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಿ, ಸ್ಪಂದಿಸಬೇಕೆಂಬ ಉದ್ದೇಶದಿಂದ ಸರ್ಕಾರವು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಆಯೋಜಿಸಿದೆ.
ಸಮುದಾಯಗಳ ಸಮಸ್ಯೆ ಹಾಗೂ ವೈಯಕ್ತಿಕ ಸಮಸ್ಯೆಗಳು ಸೇರಿದಂತೆ ಒಟ್ಟು 145 ಅರ್ಜಿಗಳು ಬಂದಿದ್ದು, ನಿವೇಶನ, ಸ್ಮಶಾನಕ್ಕೆ ಜಾಗ ಕಾಯ್ದಿರಿಸುವುದು, ವಿದ್ಯುತ್ ಕಲ್ಪಿಸುವುದು, ರಸ್ತೆ ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಕೋರಿರುವ ಅಹವಾಲುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ, ಕಾನೂನಿನ ವ್ಯಾಪ್ತಿಯಲ್ಲಿ ಸ್ಥಳದಲ್ಲಿಯೇ ಬಗೆಹರಿಸಲಾಗವುದು ಎಂದರು.
ಕೈಗಾರಿಕಾ ಇಲಾಖೆಯ 1, ಭೂ ಮಾಪನಾ ಇಲಾಖೆಯ 3, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 3 , ಆಹಾರ ಇಲಾಖೆಯ 3, ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ 3, ಪಂಚಾಯತ್ ರಾಜ್ ಇಲಾಖೆಯ 48, ಶಿಕ್ಷಣ ಇಲಾಖೆ 5, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ 2, ಪೊಲೀಸ್ ಇಲಾಖೆಯ 5, ಕಂದಾಯ ಇಲಾಖೆಯ 51, ಅರಣ್ಯ ಇಲಾಖೆಯ 5, ಲೋಕೋಪಯೋಗಿ ಇಲಾಖೆಯ 2, ಸಣ್ಣ ನೀರಾವರಿ ಇಲಾಖೆಯ 2, ಮೆಸ್ಕಾಂನ 7, ಗಿರಿಜನ ಸಮಗ್ರ ಅಭಿವೃದ್ಧಿ ಇಲಾಖೆ 3, ಕೆ.ಎಸ್.ಆರ್.ಟಿ.ಸಿ 2 ಅರ್ಜಿಗಳು
ಸೇರಿದಂತೆ ಒಟ್ಟು 145 ಅರ್ಜಿಗಳನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪುರಂದರ ಕೆ, ಕುದುರೆಮುಖ ಡಿ.ಎಫ್.ಒ ಗಣಪತಿ, ಎ.ಸಿ.ಎಫ್ ಕಾಜಲ್, ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್, ಕುಂದಾಪುರ ಡಿ.ಎಫ್.ಒ ಆಶಿಷ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.