ಮಲ್ಪೆ: ನಾಪತ್ತೆಯಾಗಿರುವ ಮೀನುಗಾರರ ಮನೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಭೇಟಿ ನೀಡಿ ಸಾಂತ್ವನ ಹೇಳಿದರು.
ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಮಾಲೀಕನಾಗಿರುವ ಬಡನಿಡಿಯೂರಿನ ಪಾವಂಜಿಗುಡ್ಡೆಯ ಚಂದ್ರಶೇಖರ್ ಅವರ ಮನೆಗೆ ತೆರಳಿದ ಸಚಿವರು, ಚಂದ್ರಶೇಖರ್ ಅವರ ಪತ್ನಿ ಶ್ಯಾಮಲಾರಿಗೆ ಸಾಂತ್ವನ ಹೇಳಿದರು. ಸರಕಾರ ವಿಷಯ ತಿಳಿದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ, ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕೆ ಬೇಕಾದ ಎಲ್ಲಾ ಕ್ರಮಕೈಗೊಳ್ಳಲು ನಿರ್ದೇಶನ ನೀಡಿದೆ ಎಂದು ತಿಳಿಸಿದರು.
ನಿಮ್ಮ ಪತಿ ಕಾಣೆಯಾದದ್ದು ನಮಗೂ ನೋವಿದೆ. ನಿಮ್ಮೊಂದಿಗೆ ನಾವು ಇದ್ದೇವೆ. ನಿಮಗೆ ಆದ ನೋವು ನಮಗೂ ಆಗಿದೆ. ನಾಪತ್ತೆಯಾದ ಎಲ್ಲಾ ಮೀನುಗಾರರು ಸುರಕ್ಷಿತವಾಗಿ ಬರಲು ನಾವೆಲ್ಲ ಒಟ್ಟಾಗಿ ದೇವರಲ್ಲಿ ಪ್ರಾರ್ಥಿಸೋಣ ಎಂದು ಸಚಿವೆ ಜಯಮಾಲ ಸಾಂತ್ವನ ಹೇಳಿದರು.
ಆ ನಂತರ ನಾಪತ್ತೆಯಾಗಿರುವ ಬೋಟ್ ನಲ್ಲಿ ದುಡಿಯುತ್ತಿದ್ದ ಮೀನುಗಾರ ದಾಮೋದರ ಅವರ ಮನೆಗೆ ಭೇಟಿ ನೀಡಿ, ಅವರ ತಂದೆ ಸುವರ್ಣ ತಿಂಗಳಾಯ ಹಾಗೂ ತಾಯಿ ಸೀತಾ ಸಾಲಿಯಾನ್, ಪತ್ನಿ ಶ್ಯಾಮಲಾ ಅವರಿಗೆ ಧೈರ್ಯ ತುಂಬಿದರು.
ಸಚಿವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು:
ಸಚಿವರು ಮೀನುಗಾರರ ಮನೆಗಳಿಗೆ ಭೇಟಿ ನೀಡುತ್ತಾರೆ ಎನ್ನುವುದನ್ನು ಮೊದಲೇ ಅರಿತಿದ್ದ ಸ್ಥಳೀಯರು, ನಾಪತ್ತೆಯಾಗಿರುವ ಮೀನುಗಾರರ ಮನೆಯ ಮುಂದೆ ಜಮಾಯಿಸಿದ್ದರು. ಮೀನುಗಾರರ ಶೋಧದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಚಿವೆ ಜಯಮಾಲ ಅವರ ಎದುರು ಅಸಮಾಧಾನ ವ್ಯಕ್ತಪಡಿಸಿದರು. ಮೀನುಗಾರರು ನಾಪತ್ತೆಯಾಗಿ ಸುಮಾರು 23 ದಿನಗಳು ಕಳೆದಿದೆ. ಈಗ ಮನೆಯವರಿಗೆ ಸಾಂತ್ವನ ಹೇಳಲು ಬರುತ್ತಿದ್ದೀರಾ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಇನ್ನಾದರೂ ಮೀನುಗಾರರ ಶೋಧ ಕಾರ್ಯವನ್ನು ಚುರುಕುಗೊಳಿಸಿ ಎಂದು ಸಚಿವರನ್ನು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ನಾವು ದೂರು ದಾಖಲಾದ ದಿನದಿಂದ ಎಸ್ಪಿಯ ಜೊತೆ ಸಂಪರ್ಕ ದಲ್ಲಿದ್ದೇವೆ. ಅಲ್ಲದೆ ಮೀನುಗಾರರ ಪತ್ತೆಗೆ ಬೇಕಾದ ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ಮುಖ್ಯಮಂತ್ರಿಗಳು ನೇರೆಯ ಗೋವಾ, ಮಹಾರಾಷ್ಟ್ರ ರಾಜ್ಯದ ಜೊತೆ ಸಂಪರ್ಕದಲ್ಲಿದ್ದು, ಶೋಧ ಕಾರ್ಯಕ್ಕೆ ಅಲ್ಲಿನ ಸರಕಾರಗಳ ಸಹಕಾರವನ್ನು ಕೋರಿದ್ದಾರೆಂದು ಸ್ಥಳೀಯರಿಗೆ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ್ ತೋನ್ಸೆ, ಮುಖಂಡರಾದ ಮಹಾಬಲ ಕುಂದರ್, ಮೀನುಗಾರಿಕೆ ಇಲಾಖೆ ಅಧಿಕಾರಿ ಪಾರ್ಶ್ವನಾಥ್ ಹಾಜರಿದ್ದರು.