ಉಡುಪಿ: ರೈತರು ಮನೆ ನಿರ್ಮಾಣ, ತೋಟ ಅಭಿವೃದ್ಧಿ, ಬೇಲಿ ನಿರ್ಮಾಣ ಮುಂತಾದ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲು10 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವ ಕುರಿತಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಜಾರಿಗೆ ಪ್ರಯತ್ನಿಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಭರವಸೆ ನೀಡಿದ್ದಾರೆ.
ಅವರು ಭಾನುವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ರೈತರ ದಿನಾಚರಣೆ ಮತ್ತು ರೈತ ಜನ ಸಂಪರ್ಕ ಸಭೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ಬೆಳೆಗಳಿಗೆ ವಿಮೆ ಮಾಡಿಸಿ:
ರೈತರಿಗೆ ಸಾಲ ನೀಡಿ, ಮನ್ನಾ ಮಾಡುವ ಬದಲು ಮನೆ ನಿರ್ಮಾಣ, ತೋಟ ಅಭಿವೃದ್ಧಿ, ಬೇಲಿ ನಿರ್ಮಾಣ ಮುಂತಾದ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲು 10 ಲಕ್ಷ ದ ವರೆಗೆ ಬಡ್ಡಿ ರಹಿತವಾಗಿ ಸಾಲ ನೀಡಿ ಎಂದು ಸಭೆಯಲ್ಲಿ ರೈತರು ಸಚಿವರನ್ನು ಕೋರಿದರು. ಈ ಕುರಿತಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಜಾರಿಗೆ ಪ್ರಯತ್ನಿಸಲಾಗುವುದು ಎಂದ ಸಚಿವರು, ಎಲ್ಲಾ ರೈತರು ತಮ್ಮ ಬೆಳೆಗಳಿಗೆ ಬೆಲೆ ವಿಮೆ ಮಾಡಿಸುವಂತೆ ತಿಳಿಸಿ, ರೈತರಿಗೆ ಈ ಕುರಿತು ಪ್ರತಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳು ಮಾಹಿತಿ ನೀಡುವಂತೆ ಸೂಚಿಸಿದರು.
ಕಬ್ಬು ಬೆಳೆಯಲು ರೈತರು ಸಿದ್ದ:
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಕುರಿತಂತೆ ನಡೆದ ಚರ್ಚೆಯಲ್ಲಿ, ಸಕ್ಕರೆ ಬೆಳೆಯಲು ತಾವು ಸಿದ್ದರಿದ್ದು ಕಾರ್ಖಾನೆಯ ಅವಶ್ಯಕತೆಯಿದೆ ಎಂದು ರೈತರು ತಿಳಿಸಿದರು. ಈಗಾಗಲೇ 2800 ರೈತರು ಕಬ್ಬು ಬೆಳೆಯಲು ಸಿದ್ದರಿರುವುದಾಗಿ ಒಪ್ಪಿಗೆ ಪತ್ರ ನೀಡಿರುವುದಾಗಿ ರೈತ ಸಂಘದ ನಾಯಕರು ತಿಳಿಸಿದರು. ಆದರೆ ವಾರಾಹಿ ಯೋಜನೆ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ಶೀಘ್ರವಾಗಿ ಯೋಜನೆಯ ಪೂರ್ಣಗೊಂಡು ಸಂಪೂರ್ಣ ನೀರಾವರಿ ದೊರೆತಲ್ಲಿ ಸಕ್ಕರೆ ಕಾರ್ಖಾನೆಗೆ ಕಬ್ಬಿನ ಕೊರತೆಯಾಗುವುದಿಲ್ಲ. ಕಾರ್ಖಾನೆಯನ್ನು ಪುನಃಶ್ಚೇತನ ಮಾಡುವ ಬದಲು ಮರು ನಿರ್ಮಾಣ ಮಾಡಬೇಕು ಎಂದು ರೈತರು ಕೋರಿದರು.
ವಿವಿಧ ರೈತ ಸಂಘಟನೆಗಳ ಮುಖಂಡರು, ರೈತರು ಸಭೆಯಲ್ಲಿ ಉಪಸ್ಥಿತರಿದ್ದರು.