ಜನೌಷಧ ಅತ್ಯಂತ ಉತ್ತಮ ಗುಣಮಟ್ಟ ಹೊಂದಿದೆ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಉಡುಪಿ: ಪ್ರಧಾನಮಂತ್ರಿ ಜನೌಷಧ ಕೇಂದ್ರಗಳ ಮೂಲಕ ಅತ್ಯಂತ ಕಡಿಮೆ ಹಾಗೂ ಉತ್ತಮ ಗುಣಮಟ್ಟದ ಔಷಧಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಪಡೆಯುವಂತಾಗಬೇಕು ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಜನಔಷಧಿ ದಿನಾಚರಣೆ ಅಂಗವಾಗಿ ಬ್ರಹ್ಮಾವರದಲ್ಲಿ ಇಂದು ಆಯೋಜಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಕಾನ್ಫರೆನ್ಸ್ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ 2015 ರಲ್ಲಿ ನಡೆದ ಸರ್ವೇಯಲ್ಲಿ, ದೇಶದ ನಾಗರಿಕರು ತಮ್ಮ ದುಡಿಮೆಯನ್ನು ಯಾವ ಯಾವ ಉದ್ದೇಶಕ್ಕೆ ಬಳಸುತ್ತಾರೆ ಎಂಬುದರ ಕುರಿತು ಪ್ರಧಾನ ಮಂತ್ರಿಗಳು  ಪರಿಶೀಲಿಸಿದಾಗ ತಮ್ಮ ಆರೋಗ್ಯದ ಉದ್ದೇಶಕ್ಕಾಗಿ, ತಮ್ಮ ಆದಾಯದ ಶೇ. 15-ರಿಂದ ಶೇ. 30ರಷ್ಟು ಮಧ್ಯಮ ಮತ್ತು ಕೆಳ ವರ್ಗದ ಜನತೆ ಬಳಸುತ್ತಿದ್ದಾರೆ. ಇದರಿಂದ 1 ರಿಂದ 1.25 ಕೋಟಿ ಮಂದಿ ಬಡತನ ರೇಖೆಗಿಂತ ಕೆಳಗಡೆ ಬರುತ್ತಿದ್ದು, ಇದನ್ನು ತಪ್ಪಿಸಲು ಪ್ರದಾನಮಂತ್ರಿ ನರೇಂದ್ರ ಮೋದಿ ಅವರು, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಲು ನಿರ್ಧರಿಸಿದ್ದರು ಎಂದರು.

ಈ ವರ್ಷದ ಬಜೆಟ್ ನಲ್ಲಿ 2.33 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದ್ದು, ಈ ಅನುದಾನದಲ್ಲಿ ಆಯುಷ್ಮಾನ್ ಭಾರತ್, ಇಂದ್ರಧನುಷ್, ಗರ್ಭಿಣಿ ಮಹಿಳೆಯರಿಗೆ ನೆರವು, ಪೋಷಣ್ ಆಭಿಯಾನ , ಸ್ವಚ್ಛ ನೀರು ಅಭಿಯಾನ ಆಯೋಜಿಸಲಾಗುತ್ತಿದೆ.
ಜನೌಷಧಿ ಕೇಂದ್ರಗಳ ಮೂಲಕ ಕಡಿಮೆ ಖರ್ಚಿನಲ್ಲಿ, ಗುಣಮಟ್ಟದ ಔಷಧಗಳನ್ನು ನೀಡಲಾಗುತ್ತಿದೆ, ಇಲ್ಲಿನ ಔಷಧಗಳ ಬೆಲೆ ಕಡೆಮೆಯಿದೆ ಎಂದು ಗುಣಮಟ್ಟದ ಬಗ್ಗೆ ಅಪನಂಬಿಕೆ ಬೇಡ, ಪ್ರತಿ ಔಷಧಿಯನ್ನು  ಲ್ಯಾಬ್ ನಲ್ಲಿ ಪರಿಶೀಲನೆ ನಡೆಸಿ, ಉತ್ತಮ ಗುಣಮಟ್ಟದ ಔಷಧಗಳನ್ನು ಸರಬರಾಜು ಮಾಡಲಾಗುತ್ತಿದೆ.  ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 49 ಜನೌಷಧಿ  ಕೇಂದ್ರಗಳಿದ್ದು, ಪ್ರಧಾನಿ ಅವರ ಸೂಚನೆಯಂತೆ ಇದನ್ನು 75ಕ್ಕೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ವೀಡಿಯೋ ಕಾನ್ಫರೆನ್ಸ್ ಮೂಲಕ ಜನೌಷಧಿ ಪರಿಯೋಜನೆಯ ಬಗ್ಗೆ ಸಾರ್ವಜನಕರೊಂದಿಗೆ ನೇರ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಂಗಳೂರಿನ ವೈದ್ಯ ಡಾ.ಪದ್ಮನಾಭ ಕಾಮತ್ ಅವರೊಂದಿಗೆ ಮಾತನಾಡಿ, ಅವರು ತಮ್ಮ ಜನೌಷಧಿ ಕೆಂದ್ರದಲ್ಲಿ ಔಷಧ ಮಾರಾಟ ಮಾತ್ರವಲ್ಲದೇ ಸಾರ್ವಜನಿಕರಿಗೆ ಇ.ಸಿ.ಜಿ.ಪರೀಕ್ಷೆಯನ್ನು  ನಡೆಸುತ್ತಿದ್ದು, ಇದರಿಂದ ಇದುವರೆಗೆ 100 ಕ್ಕೂ  ಹೆಚ್ಚು ಮಂದಿಗೆ ಹೃದಯಾಘಾತವಾಗುವ ಕುರಿತು ಮುಂಚಿತವಾಗಿ ಪತ್ತೆ ಹಚ್ಚಿ , ಅವರ ಪ್ರಾಣ ಉಳಿಸಿದ್ದು, ಇದರಿಂದ ಜನೌಷಧ ಕೇಂದ್ರ ಜನೋಪಯೋಗಿ ಆಗಿರುವ ಕುರಿತು ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ದೇಶದ 7500ನೇ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ವರ್ಚುವಲ್ ವೇದಿಕೆ ಮೂಲಕ ಪ್ರಧಾನಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ , ಉಡುಪಿ ಜನೌಷಧಿ ಕೇಂದ್ರಗಳ ನೋಡೆಲ್ ಅಧಿಕಾರಿ ಅನಿಲ , ಸ್ಥಳೀಯ ವಿವಿಧ ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.