ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಸಾಂಪ್ರದಾಯಿಕ ಪರ್ಯಾಯ ಸಂಚಾರ ಪೂರೈಸಿರುವ ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ಅವರ ಪುರಪ್ರವೇಶ ಹಾಗೂ ಪೌರಸನ್ಮಾನ ಸಮಾರಂಭ ಜ. 8ರಂದು ಉಡುಪಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ನಡೆಯಲಿದೆ ಎಂದು ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ ಶಾಸಕ ಕೆ. ರಘುಪತಿ ಭಟ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಮಧ್ಯಾಹ್ನ 2.30ಕ್ಕೆ ನಗರದ ಜೋಡುಕಟ್ಟೆಗೆ ಆಗಮಿಸಲಿರುವ ಶ್ರೀಗಳಿಗೆ ಭವ್ಯ ಸ್ವಾಗತ ಕೋರಲಾಗುವುದು. ಬಳಿಕ ಅಲ್ಲಿಂದ ಮಠದವರೆಗೆ ಶ್ರೀಗಳ ಪುರಪ್ರವೇಶ ಮೆರವಣಿಗೆ ಹೊರಡಲಿದ್ದು, ಕಲ್ಪನಾ ಮಾರ್ಗವಾಗಿ ತೆಂಕಪೇಟೆ ಮೂಲಕ ರಥಬೀದಿಯನ್ನು ಪ್ರವೇಶಿಸಲಿದೆ ಎಂದು ತಿಳಿಸಿದರು.
ಸಂಜೆ 5.55ಕ್ಕೆ ಮಠ ಪ್ರವೇಶಮೆರವಣಿಗೆಯಲ್ಲಿ ಆಗಮಿಸುವ ಶ್ರೀಗಳು ಸಂಜೆ 5.55ಕ್ಕೆ ಅದಮಾರು ಮಠದ ಪ್ರವೇಶ ಮಾಡುವರು. ಬಳಿಕ ಮಠದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ. ರಾತ್ರಿ 8 ಗಂಟೆಗೆ ನಗರಸಭೆ ಹಾಗೂ ಕೃಷ್ಣ ಸೇವಾ ಬಳಗದ ವತಿಯಿಂದ ಶ್ರೀಗಳಿಗೆ ಪೌರ ಸನ್ಮಾನ ನಡೆಯಲಿದೆ ಎಂದರು.
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಪೌರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಅನುಗ್ರಹ ಸಂದೇಶ ನೀಡುವರು. ಪಲಿಮಾರು ಕಿರಿಯ ವಿದ್ಯಾರಾಜೇಶ್ವರ ಸ್ವಾಮೀಜಿ ಉಪಸ್ಥಿತರಿರುವರು.
ಸಚಿವರಾದ ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ವಿ. ಸೋಮಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.
ಪರಿಸರ ಸ್ನೇಹಿ ಮೆರವಣಿಗೆ ಈಶಪ್ರಿಯ ಶ್ರೀಗಳ ಅಪೇಕ್ಷೆಯಂತೆ ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಪರಿಸರ ಕಾಳಜಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೆರವಣಿಗೆ ಸಾಗುವ ರಸ್ತೆಯುದ್ಧಕ್ಕೂ ತಳಿರು ತೋರಣಗಳ ಅಲಂಕಾರ ಮಾಡಲಾಗುವುದು. ಬಾಳೆ ಗಿಡಗಳನ್ನು ಬೇರುಸಹಿತ ಕಿತ್ತುತಂದು ತೋರಣಗಳಿಗೆ ಬಳಸಲಾಗುವುದು. ಪುರಪ್ರವೇಶ ಮುಗಿದ ಬಳಿಕ ಆ ಬಾಳೆ ಗಿಡಗಳನ್ನು ಮತ್ತೆ ನೆಡಲಾಗುವುದು ಎಂದು ಪ್ರಚಾರ ಸಮಿತಿಯ ಗೋವಿಂದರಾಜ್ ತಿಳಿಸಿದರು.
ತೌಳವ ಸಂಸ್ಕೃತಿಯ ಸೊಬಗುಪುರಪ್ರವೇಶದ ವೈಭವದಲ್ಲಿ ತೌಳವ ಸಾಂಸ್ಕೃತಿಕ ಸೊಬಗಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಮಠದ ಪರಂಪರೆ, ಸಂಪ್ರದಾಯಗಳಿಗೆ ಮನ್ನಣೆ ನೀಡಲಾಗಿದ್ದು, ಆಧುನಿಕ ಸಂಭ್ರಮಗಳಿಗೆ ಅವಕಾಶ ಇರುವುದಿಲ್ಲ. ಮಧ್ವಾಚಾರ್ಯರು, ನರಸಿಂಹತೀರ್ಥರಿಂದ ಹಿಡಿದು
ವಿಬುಧೇಶತೀರ್ಥರ ವರೆಗಿನ ಮಠದ ಪೂರ್ವ ಯತಿಗಳ ಹೆಸರುಗಳನ್ನು ಬರೆದು ಸ್ವಾಗತ ತೋರಣದ ಕಂಬಗಳಿಗೆ ಕಟ್ಟಲಾಗುವುದು. ಪ್ಲಾಸ್ಟಿಕ್ ಫ್ಲೆಕ್ಸ್ಗಳನ್ನು ನಿಷೇಧಿಸಲಾಗಿದ್ದು,ಬಟ್ಟೆಯ ಬ್ಯಾನರ್ಗಳನ್ನು ಉಪಯೋಗಿಸುವಂತೆ ವಿನಂತಿಸಲಾಗಿದೆ. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ಗೋಷ್ಠಿಯಲ್ಲಿ ಸೇವಾ ಬಳಗದ ವೈ.ಆರ್. ರಾಮಚಂದ್ರ, ರಾಘವೇಂದ್ರ ಭಟ್, ಪ್ರದೀಪ್ ಕುಮಾರ್, ದಿನೇಶ್ ಪುತ್ರನ್, ಸುಬ್ರಹ್ಮಣ್ಯ ಮಾರ್ಪಳ್ಳಿ, ಯಶ್ ಪಾಲ್ ಸುವರ್ಣ ಉಪಸ್ಥಿತರಿದ್ದರು.
67 ಕಲಾ ತಂಡಗಳ ಮೆರಗು
ಜಾನಪದ ತಂಡ, ಹುಲಿವೇಷ ತಂಡ ಹಾಗೂ ಭಜನಾ ತಂಡಗಳು ಸೇರಿದಂತೆ ಒಟ್ಟು 67 ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಈ ಎಲ್ಲ ತಂಡಗಳಲ್ಲಿಯೂ ಮಠದ ಅಧೀನದಲ್ಲಿರುವ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಆ ಮೂಲಕ ದೇಶದ ವಿವಿಧ ರಾಜ್ಯಗಳ ಕಲಾ ವೈಭವವನ್ನು ಅನಾವರಣಗೊಳಿಸುವರು. ಹಾಗೆಯೇ ಸಾಂಪ್ರದಾಯಿಕ ಚಂಡೆ ಬಳಗ,
ಪಂಚವಾದ್ಯ ಬಳಗ ಹಾಗೂ ಭಜನಾ ತಂಡಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಲಿವೆ ಎಂದು ಪ್ರಚಾರ ಸಮಿತಿಯ ಯಶ್ಪಾಲ್ ಸುವರ್ಣ ಹೇಳಿದರು.