ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದಲ್ಲಿ ಜನವರಿ 15ರಿಂದ 21ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥ ಸಮರ್ಪಣೆ, ರಥೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ . ಜನವರಿ 15 ಮತ್ತು 16 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ.
ವಿಶೇಷ:
ಜ. 17ರಂದು ಬೆಳಿಗ್ಗೆ ಸಾಮೂಹಿಕ ಆಶ್ಲೇಷಬಲಿ, ನೂತನ ರಥ ಸಮರ್ಪಣೆ, ಅಪರಾಹ್ನ 2 ರಿಂದ ಉಡುಪಿ ಜೋಡುಕಟ್ಟೆಯಿಂದ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ಜರಗಲಿದೆ. ಸಂಜೆ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಧಾರ್ಮಿಕ ಸಭೆ ಉದ್ಘಾಟಿಸುವರು. ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಯಾತ್ರಿನಿವಾಸ ಉದ್ಘಾಟಿಸುವರು. ಶಾಸಕ ರಘುಪತಿ ಭಟ್ ಅವರಿಂದ ನೂತನ ಸ್ವಾಗತಗೋಪುರ ಲೋಕಾರ್ಪಣೆಗೊಳ್ಳಲಿದೆ.
ಬೃಹತ್ ಸಮಾವೇಶ:
ರಾತ್ರಿ 8ರಿಂದ ಜರುಗುವ ಆಖಿಲ ಕರ್ನಾಟಕ ಶ್ರೀ ಬಬ್ಬುಸ್ವಾಮಿ ದೇವಸ್ಥಾನಗಳ ಹತ್ತು ಸಮಸ್ತರ ಬೃಹತ್ ಸಮಾವೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸುವರು. ಚಿತ್ರದುರ್ಗ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀ ಕ್ಷೇತ್ರ ಕಚ್ಚೂರಿನ ಆಡಳಿತ ಮಂಡಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ಬಾರಕೂರು ಅಧ್ಯಕ್ಷತೆ ವಹಿಸುವರು. ಜನಪ್ರತಿನಿಧಿಗಳು, ಗಣ್ಯರು ಬಾರಕೂರಿನ ವಿವಿಧ ದೇವಸ್ಥಾನ, ಚರ್ಚ್, ಮಸೀದಿಯ ಮುಖ್ಯಸ್ಥರು ಪಾಲ್ಗೊಳ್ಳುವರು.ಜ. 18ರಂದು ಬೆಳಿಗ್ಗೆ ಬ್ರಹ್ಮಕಲಶೋತ್ಸವ, ಸಂಜೆ ಆಳ್ವಾಸ್ ಸಾಂಸ್ಕೃತಿಕ ವೈಭವ, ರಾತ್ರಿ ಗೆಂಡೋತ್ಸವ, ದೀಪೋತ್ಸವ ಜರಗಲಿದೆ.
ಪ್ರತಿಭಾ ಪುರಸ್ಕಾರ ಸಂಭ್ರಮ:
ಜ19ರಂದು ಮಧ್ಯಾಹ್ನ ಜರಗುವ ಧಾರ್ಮಿಕ ಸಭೆ ಮತ್ತು ಪ್ರತಿಭಾ ಪುರಸ್ಕಾರವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸುವರು. ಹರಿಹರಪುರದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ತಾಳಗುಪ್ಪ ಶ್ರೀ ಕೂಡ್ಲಿಮಠದ ಶ್ರೀ ಸಿದ್ದವೀರ ಮಹಾಸ್ವಾಮೀಜಿ ಆಶೀರ್ವಚನ ನೀಡುವರು. ಸಚಿವರು, ಬಾರಕೂರಿನ ವಿವಿಧ ದೇವಸ್ಥಾನಗಳ ಮುಖ್ಯಸ್ಥರು ಉಪಸ್ಥಿತರಿರುವರು. ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ರಥೋತ್ಸವ, ರಾಜ್ಯಮಟ್ಟದ ಜನಪದ ಉತ್ಸವ ನಡೆಯಲಿದೆ. ಜ.20ರಂದು ತುಲಾಭಾರ ಸೇವೆ, 21ರಂದು ಶ್ರೀ ಕೊರಗಜ್ಜ ಸೇವೆ ಜರಗಲಿದೆ