ಜಲ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಮಹತ್ವದ್ದು: ಪುಷ್ಪ ತಾವೂರ್ 

ಉಡುಪಿ: ನೈಸರ್ಗಿಕ ಹಾಗೂ ಜಲ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಯುವಜನತೆಯ ಪಾತ್ರ ಮಹತ್ತರವಾದುದು ಎಂದು ಉದ್ಯಾವರ ಸಂತ ಫ್ರಾನ್ಸಿಸ್‌ ಝೇವಿಯರ್‌ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪ ತಾವೂರ್‌ ಹೇಳಿದರು.
ಉದ್ಯಾವರ ಸಂತ ಫ್ರಾನ್ಸಿಸ್‌ ಝೇವಿಯರ್‌ ಆಂಗ್ಲ ಮಾಧ್ಯಮ ಶಾಲೆ ರೋಟರಿ ಉಡುಪಿ ರಾಯಲ್‌, ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಸಹಕಾರ ಭಾರತಿ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ವನಮಹೋತ್ಸವ, ಪರಿಸರ ಮತ್ತು ಜಲ ಸಂರಕ್ಷಣೆ, ರಸ್ತೆ ಸುರಕ್ಷತೆ, ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಜಾಗತಿಕ ಮಟ್ಟದಲ್ಲಿ ಜಲ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಿಷಯದಲ್ಲಿ ಆಂದೋಲನವೇ ಆರಂಭವಾಗಿದೆ. ಹಾಗಾಗಿ ಯುವಜನರು ಈಗಿನಿಂದಲೇ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದರ ಜತೆಗೆ ಈ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ಇದೆ ಎಂದರು. ಪ್ರಕೃತಿ ಸಂಪತ್ತಿನ ಮಿತ ಬಳಕೆಯೊಂದಿಗೆ ಅದನ್ನು ರಕ್ಷಣೆ ಮಾಡಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆ ಪ್ರಕೃತಿ ಸಂಪನ್ಮೂಲಗಳಿಲ್ಲದೆ ಬದುಕುವ ಸ್ಥಿತಿ ನಿರ್ಮಾಣ ಆಗಬಹುದು ಎಂದು ಹೇಳಿದರು.
ರೋಟರಿಯ ಉಡುಪಿ ರಾಯಲ್‌ ಸ್ಥಾಪಕ ಅಧ್ಯಕ್ಷ ರತ್ನಾಕರ ಇಂದ್ರಾಳಿ ಮಾತನಾಡಿ, ಕಾಲೇಜಿನ ಇಂಟರ್‍ಯಾಕ್ಟ್‌ ಕ್ಲಬ್‌ ಸದಸ್ಯರು ವಿದ್ಯಾರ್ಥಿಗಳಿಗೆ ಹಾಗೂ ಪರಿಸರಕ್ಕೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆ ಮೂಲಕ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಎಸ್‌ಐ ಜಿ. ಮಧು ಶಾಲೆಯ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂಐಟಿಯ ಉಪನ್ಯಾಸಕ ಬಾಲಕೃಷ್ಣ ಮದ್ದೋಡಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ರಾಯಲ್‌ ಅಧ್ಯಕ್ಷ ಬಿ.ಕೆ. ಯಶವಂತ್‌ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಭಾರತಿ ಅಧ್ಯಕ್ಷ ದಿನೇಶ್‌ ಶೆಟ್ಟಿ ಆತ್ರಾಡಿ, ನಗರಸಭಾ ಸದಸ್ಯ ಮಂಜುನಾಥ್‌ ಮಣಿಪಾಲ, ಇಂಟರ್‍ಯಾಕ್ಟ್‌ ಅಧ್ಯಕ್ಷ ಸುಜನ್‌, ಕಾರ್ಯದರ್ಶಿ ಸ್ಫೂರ್ತಿ ಉಪಸ್ಥಿತರಿದ್ದರು.
ಇಂಟರ್‍ಯಾಕ್ಟ್‌ ಸಂಯೋಜಕಿ ಸಿಂಥಿಯಾ ಪಿರೇರಾ ಸ್ವಾಗತಿಸಿದರು. ಸ್ಟೆಫಿ ವಂದಿಸಿದರು.