ಉಡುಪಿ: ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ, ದೇವರ ಚಿನ್ನದ ಒಡವೆಗಳನ್ನು ಕಳವು ಮಾಡಿದ ಆರೋಪಿಗಳಿಗೆ ನಗರದ ಪ್ರಧಾನ ಸಿ. ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2015 ಸೆಪ್ಟಂಬರ್ 21 ರಂದು ನರಸಿಂಹರಾಜು ಅಲಿಯಾಸ್ ಬಸವರಾಜುಲಿಯಾಸ್ ರಾಜು ಮತ್ತು ಮೊಹಮ್ಮದ್ ಶಬ್ಬೀರ್ ಅಲಿಯಾಸ್ ಶಬ್ಬೀರ್ ಎಂಬುವವರು ಉಡುಪಿ ತಾಲೂಕು ಶಿರೂರು ಗ್ರಾಮದ ಶ್ರೀ ಮಹಾಲಸಾ ನಾರಾಯಣೀ ದೇವಿ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗ ಮುರಿದು, ಒಳ ಪ್ರವೇಶಿಸಿ, ದೇವರಿಗೆ ಸಂಬಂಧಿಸಿದ ಒಟ್ಟು 8,66,800 ರೂ. ಮೌಲ್ಯದ 339.940 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳವು
ಮಾಡಿರುವ ಹಿನ್ನೆಲೆ, ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು ಆರೋಪಿಗಳಿಗೆ ತಲಾ 2 ವರ್ಷ 6 ತಿಂಗಳು ಜೈಲು ಶಿಕ್ಷೆ ಹಾಗೂ ತಲಾ 5,500 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಕೆ ವಾದ ಮಂಡಿಸಿರುತ್ತಾರೆ.