ಉಡುಪಿ: ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಜಿಲ್ಲಾ ಕೃಷಿಕ ಸಮಾಜ ವತಿಯಿಂದ ನಡೆದ ಹಲಸು ಮೇಳಕ್ಕೆ ಭರ್ಜರಿ ಓಪನಿಂಗ್ ದೊರೆತಿದೆ.
ಹಲಸಿನ್ ವಿವಿಧ ಖಾದ್ಯಗಳಾದ ಹಲಸಿನ ಪಾಯಸ, ಕಬಾಬ್, ಮುಳ್ಳ, ಚಟ್ಟಂಬಡೆ, ಮಾಂಬಳ, ಹಪ್ಪಳ, ಸಂಡಿಗೆ, ಬಿಸಿ ಬಿಸಿಯಾಗಿ ಅಲ್ಲೇ ತಟ್ಟಿ ಕಾಯಿಸಿಕೊಡುವ ಹಲಸಿನ ಹೋಳಿಗೆ, ಹೀಗೆ ಬಾಯಿ ಚಪ್ಪರಿಸುವಂತಹ ವೈವಿಧ್ಯಮಯ ಹಲಸಿನ ಖಾದ್ಯಗಳು ಅಲ್ಲಿತ್ತು.
ಸುಮಾರು 24ಕ್ಕೂ ಅಧಿಕ ಮಳಿಗೆಗಳು ತೆರೆದುಕೊಳ್ಳುತ್ತಿತ್ತು. ಪ್ರತಿಯೊಂದು ಮಳಿಗೆಗಳಲ್ಲೂ ಭಿನ್ನವಾದ ವಸ್ತುಗಳು. ಹಲಸಿನ ಖಾದ್ಯಗಳು ಮಾತ್ರವಲ್ಲದೆ, ಕುರುಕಲು ತಿನಿಸು, ವಸ್ತ್ರ, ಊರಿನ ಪರ ಊರಿನ ಹಣ್ಣುಗಳು ಜತೆಗೆ ಗಿಡಗಳೂ ಮಾರಾಟಕ್ಕಿತ್ತು. ಜತೆಗೆ ವಿವಿಧ ತಳಿಯ ಹಣ್ಣಿನ ಗಿಡಗಳು, ಮಳೆಗೆ ಬೆಚ್ಚಗೆ ತಿನ್ನಲು ಮನೆಯಲ್ಲೇ ತಯಾರಿಸಿದ ಕುರುಕಲು ತಿನಿಸುಗಳು ಗ್ರಾಹಕರನ್ನು ಸೆಳೆಯುತ್ತಿತ್ತು.
ಹಳೆಯ ಸಾಂಪ್ರದಾಯಿಕ ತಿನಿಸು
ಹಲಸಿನ ಬೀಜದ ಚಟ್ಟಂಬಡೆ, ಉಪ್ಪಿನ ಸೊಳೆ, ಬೇಯಿಸಿದ ಹಲಸಿನ ಬೀಜ, ಐಸ್ಕ್ರೀಂ, ಹಲಸಿನ ಪೋಡಿ, ಉಪ್ಪಿನಕಾಯಿ, ಹಲಸಿನ ಗಟ್ಟಿ, ಹಲಸಿನ ಬೀಜದ ಹಪ್ಪಳ, ಉಪ್ಪಿನ ಸೊಳೆಯಿಂದ ತಯಾರಿಸಿದ ತಿನಿಸುಗಳು, ಸಾಂತನಿ, ಹಲಸಿನ ದೋಸೆ, ಹೋಳಿಗೆ ಹೀಗೆ ಹಲಸಿನಿಂದಲೇ, ಮಳಿಗೆಗಳಲ್ಲೇ ಬಿಸಿಯಾಗಿ ರುಚಿಯಾಗಿ ತಯಾರಿಸಿ ಕೊಡುತ್ತಿದ್ದ ಹಲಸಿನ ಸಾಂಪ್ರದಾಯಿಕ ಖಾದ್ಯಗಳಿಗೆ ಜನರ ನಾಲಗೆ ಮನಸೋತಿದ್ದವು.
ಸಸ್ಯ ಸಂತೆ ವಿಶೇಷ
ಹಲಸಿನ ಮೇಳದ ಜತೆಯಲ್ಲಿ ಸಸ್ಯ ಸಂತೆ ಆಯೋಜನೆಯೂ ವಿಶೇಷವಾಗಿತ್ತು, ತರಕಾರಿ ಸಸಿಗಳು 4 ಸಾವಿರ, ಇತರೆ ವಾಣಿಜ್ಯ ಬೆಳೆಗಳ 5 ಸಾವಿರ ಸಸಿಗಳು ಸಂತೆಯಲ್ಲಿದ್ದವು. ಕಸಿ ಗೇರು, ಅಡಕೆ, ತೆಂಗು, ಕೊಕ್ಕೊ, ಕಾಳು ಮೆಣಸು, ಇತರೆ ಅಲಂಕಾರಿಕ ಸಸಿಗಳು, ಲಿಂಬೆ, ಕರಿಬೇವು, ಹಲಸು ಸಸಿಗಳು, ತರಕಾರಿಯಲ್ಲಿ ಬೆಂಡೆ, ಬದನೆ, ಹೀರೆ, ಮೆಣಸು, ಕುಂಬಳಕಾಯಿ ಸಸಿಗಳು ಸಂತೆಯಲ್ಲಿವೆ. ತರಕಾರಿ ಸಸಿಗಳಿರುವ ಪಾಲಿಹೌಸ್ ವಿಶೇಷ ಆಕರ್ಷಣೆಯಾಗಿತ್ತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಜಿಲ್ಲಾ ಮಟ್ಟದ ಹಲಸು ಮೇಳ ಮತ್ತು ಸಸ್ಯ ಸಂತೆಗೆ ಚಾಲನೆ ನೀಡಿದರು. ಸಮಾರಂಭ ಅಧ್ಯಕ್ಷತೆಯನ್ನು ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ಜಿ.ಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕಾರ್ಕಳ ತಾ.ಪಂ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ತೋಟಗಾರಿಕಾ ಇಲಾಖೆ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ನಾಗರಾಜ ಎನ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಪ್ರದೀಪ್ ಹೆಬ್ಬಾರ್, ತಾಲೂಕು ಅಧ್ಯಕ್ಷ ಸುಭಾಷಿತ್, ಜಿಲ್ಲಾ ಕೃಷಿ ಇಲಾಖೆ ಜಂಟಿನಿರ್ದೇಶಕ ಕೆಂಪೇಗೌಡ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಸರ್ವೋತ್ತಮ, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸಂಜೀವ ನಾಯ್ಕ ಉಪಸ್ಥಿತರಿದ್ದರು.












