ಸವಲತ್ತು ಜನರಿಗೆ ತಲುಪಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ‌ ವಿರುದ್ಧ ಕ್ರಮ: ಐವನ್ ಡಿಸೋಜ

ಉಡುಪಿ: ನಮ್ಮದು ನೈಜ ಸ್ವಾತಂತ್ರ್ಯ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಹೊಂದಿರುವ ದೇಶ ಆಗಬೇಕಾದರೆ, ಸರ್ಕಾರದ ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಹೀಗಾಗಿ‌ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಐವನ್‌ ಡಿಸೋಜ ಹೇಳಿದರು.
ಇಂಡಿಯನ್‌ ಕ್ರಿಶ್ಚಿಯನ್‌ ಯೂನಿಯನ್‌ ಒಕ್ಕೂಟದ ವತಿಯಿಂದ ನಗರದ ಮಿಷನ್‌ ಕಂಪೌಂಡ್‌ನ ಸಿಎಸ್‌ಐ ಬಾಯ್ಸ್‌ ಬೋರ್ಡಿಂಗ್‌ ಹೋಮ್‌ (ಸ್ನೇಹಾಲಯ)ದಲ್ಲಿ ಶನಿವಾರ ನಡೆದ ಸಾರ್ವಜನಿಕ ಜನ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಜನರ ಮನೆ ಬಾಗಿಲಿಗೆ ಹೋಗಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಆ ಮೂಲಕ ಸಮಾಜದ
ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಬೇಕು  ಎಂದರು.
ಕುಂದಾಪುರ ಉಪವಿಭಾಗಾಧಿಕಾರಿ ಎಸ್‌.ಎಸ್‌. ಮಧುಕೇಶ್ವರ್‌ ಮಾತನಾಡಿ, ಬ್ರಿಟಿಷರ ಕಾಲದಲ್ಲಿದ್ದ ಜನವಿರೋಧಿ ಆಡಳಿತ ಇಂದು ಜನ ಸ್ನೇಹಿ ಆಗಿದೆ. ಅಂದು ಅಧಿಕಾರಿಗಳಿಗೆ ಹೆದರುವ ಪರಿಸ್ಥಿತಿ ಇತ್ತು. ಆದರೆ ಈಗ ಅಂತಹ ಪರಿಸ್ಥಿತಿಯಿಲ್ಲ. ಅಧಿಕಾರಿಗಳು ಜನರಿಗೆ ಸೇವೆ ಒದಗಿಸುವ ಮನೋಭಾವ ಹೊಂದಿದ್ದಾರೆ. ಕಾನೂನು ಚೌಕಟ್ಟಿನಡಿಯಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು.
ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಎಚ್‌.ಆರ್‌. ಲಮಾಣಿ, ಅಲ್ಪಸಂಖ್ಯಾರ ಅಭಿವೃದ್ಧಿ ನಿಗಮದ ಅಧಿಕಾರಿ ಕಿಶೋರ್‌ ಪುತ್ರನ್‌, ಆರೋಗ್ಯ ಇಲಾಖೆಯ ಡಾ. ಸುರೇಂದ್ರ ಬಾಳ್ಕರ್‌, ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌, ಉಡುಪಿ ಎಡಿಎಲ್‌ಆರ್‌ನ ಎ.ಎಸ್‌. ಮಂಜುನಾಥ್‌, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ್‌, ಇಒ ಕೆ. ರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ರಾಜ್‌, ಮಾಲಿನ್ಯ ನಿಯಂತ್ರಣ ಮಂಡಳಿಯ ಲಕ್ಷ್ಮೀಕಾಂತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಒಕ್ಕೂಟದ ಅಧ್ಯಕ್ಷ ಸುನೀಲ್‌ ಕಬ್ರಾಲ್‌ ಶಿರ್ವ, ರೊನಾಲ್ಡ್‌ ಮನೋಹರ್‌ ಕರ್ಕಡ, ತಾಪಂ ಸದಸ್ಯೆ ಡಾ. ಸುನೀತಾ ಶೆಟ್ಟಿ, ವೆರೋನಿಕಾ ಕರ್ನೇಲಿಯೊ ಉಪಸ್ಥಿತರಿದ್ದರು. ಜಂಟಿ ಕಾರ್ಯದರ್ಶಿ ಸ್ಟೀವನ್‌ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.