ಉಡುಪಿ: 1997 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಟ್ಟ ಉಡುಪಿ ಜಿಲ್ಲೆಯ ಪ್ರಪಥಮ ಉಸ್ತುವಾರಿ ಸಚಿವನಾದದ್ದು ನನಗೆ ಹೆಮ್ಮೆ ನೀಡುವ ವಿಷಯ. ಅಂದಿನಿಂದ ಇಂದಿನವರೆಗೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿಪರ ಚಟುವಟಿಕೆಗಳು ನಡೆದಿದ್ದು, ಮುಂದೆಯೂ ಕೂಡ ಅನೇಕ ಅಭಿವೃದ್ಧಿ ಕೆಲಸಗಳು ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಮಂಗಳವಾರ ನಗರದ ಐ.ಎಮ್.ಎ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕವಾಗಿದ್ದರೂ, ಜನಸಂಖ್ಯೆಯಲ್ಲಿ ದೊಡ್ಡದಾಗಿದೆ. ಯುವ ಜನಾಂಗವು ಉದ್ಯೋಗವನ್ನು ಅರಸಿ ಪರದೇಶಗಳಿಗೆ ತೆರಳುವ ಬದಲು ಸ್ವಂತ ಊರಲ್ಲಿಯೇ ಉದ್ಯೋಗ ಪಡೆಯುವಂತಾಗಲು ಸಾಫ್ಟ್ವೇರ್ ಉದ್ದಿಮೆಗಳ ಅವಶ್ಯಕತೆ ಇದೆ. ಕರಾವಳಿ ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿ ಹೊಂದಬೇಕು. ಹಾಗೆಯೇ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ.
ಜೊತೆಗೆ ಸರಕಾರಿ ಆಸ್ಪತ್ರೆಗಳನ್ನು ನವೀಕರಿಸುವುದರಿಂದ ಬಡ ವರ್ಗದವರಿಗೆ ಅನುಕೂಲವಾಗುತ್ತದೆ ಜನರು ತಮ್ಮ ಕೆಲಸಗಳಿಗೆ ಕಚೇರಿಗಳಿಗೆ ಮೈಲು ಗಟ್ಟಲೆ ಅಲೆಯುವ ಬದಲು ಸರಕಾರವೇ ಜನರ ಬಳಿ ಬರುವಂತಾಗಬೇಕು. ಆದ್ದರಿಂದ ಜಿಲ್ಲೆಯಲ್ಲಿ ಎರಡು ಅಥವಾ ಮೂರು ಉಪವಿಭಾಗಾಧಿಕಾರಿಗಳ ಕಚೇರಿ ನಿರ್ಮಾಣವಾಗಬೇಕು. ಕೃಷಿಯಲ್ಲಿ ಈಗಾಗಲೇ ಬೆಳವಣಿಗೆಯಾಗಿದ್ದು, ಮುಂದೆಯೂ ಕೂಡ ಜನರು ಕೃಷಿಗೆ ಬೆಂಬಲ ನೀಡಬೇಕು. ಜಿಲ್ಲೆಯಲ್ಲಿ ಉಡಾನ್ ಯೋಜನೆಯನ್ನು ಅನಾವರಣಗೊಳಿಸುವ ಯೋಜನೆಯಿದ್ದು, ಜನರಿಗೆ ಉದ್ಯೋಗ ನೀಡುವುದು ಹಾಗೂ ಸಂಚಾರ ಅವಧಿಯನ್ನು ಮಿತಿಗೊಳಿಸುವುದು ಯೋಜನೆಯ ಉದ್ದೇಶ ಎಂದರು.
1997 ರಲ್ಲಿ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಡಾ. ಕಲ್ಪನಾ ಗೋಪಾಲನ್ ವರ್ಚುವಲ್ ಸಂವಾದದಲ್ಲಿ ಮಾತನಾಡಿ, ಉಡುಪಿ ಜನತೆ ಸ್ನೇಹಪರರು ಹಾಗೂ ಸಹೃದಯಿಗಳಾಗಿದ್ದು, ಇಲ್ಲಿ ಪ್ರಥಮ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯ. ನಮ್ಮ ಸೇವಾವಧಿಯಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಎಂಬ ಭೇದವಿಲ್ಲದೆ ಒಗ್ಗಟ್ಟಾಗಿ ಜಿಲ್ಲೆಯ ಏಳಿಗೆಗೆ ಶ್ರಮಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಪ್ರಯುಕ್ತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಲೋಗೋ ಅನಾವರಣಗೊಳಿಸಲಾಯಿತು.
1997 ರಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ನಜೀರ್ ಪೋಲ್ಯ, ಪ್ರಮೋದ್ ಸುವರ್ಣ, ಜಯಕರ ಸುವರ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ರಹೀಂ ಉಜಿರೆ ಸ್ವಾಗತಿಸಿ, ನಿರೂಪಿಸಿದರು, ಉಮೇಶ್ ಮಾರ್ಪಳ್ಳಿ ವಂದಿಸಿದರು.