udupixpress
Home Trending ಮಂಗಳೂರಿನ ಐಟಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಬಾರದು: ಯೋಗೀಶ್ ಶೆಟ್ಟಿ ಆಗ್ರಹ

ಮಂಗಳೂರಿನ ಐಟಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಬಾರದು: ಯೋಗೀಶ್ ಶೆಟ್ಟಿ ಆಗ್ರಹ

ಉಡುಪಿ: ಮಂಗಳೂರು ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ (ಆಡಳಿತ) ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಬಾರದು ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಳೆದ ಎರಡು ದಶಕದಿಂದ ಐಟಿ ಕಚೇರಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ವ್ಯಾಪ್ತಿಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ತೆರಿಗೆ ಪಾವತಿದಾರರಿದ್ದು, ಅತಿ ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಕಚೇರಿ ಇದಾಗಿದೆ. ಇದನ್ನು ಬೇರೆ ಕಡೆಗೆ ಸ್ಥಳಾಂತರ ಮಾಡದೆ, ಮಂಗಳೂರಿನಲ್ಲಿಯೇ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರೂ ಸಂಸದರು ಬಿಜೆಪಿ ಪಕ್ಷದವರಾಗಿದ್ದರೂ ಕೇಂದ್ರದಿಂದ ಉಭಯ ಜಿಲ್ಲೆಗಳಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ.

ಉಭಯ ಜಿಲ್ಲೆಗಳ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಗಳಾಗಿದ್ದ ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಗಳನ್ನು ಇತರೆ ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸಿ, ಕೇಂದ್ರ ಸರ್ಕಾರ ಜನರಿಗೆ ಅನ್ಯಾಯ ಮಾಡಿದೆ. ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ ಗೆ ಮಾರಾಟ ಮಾಡಲು ಮುಂದಾಗಿದೆ. ಇದನ್ನು ತಡೆಯುವಲ್ಲಿ ಉಭಯ ಜಿಲ್ಲೆಗಳ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಹೇಳಿದರು.