ವ್ಯಕ್ತಿಗಳ ಪಾಸ್‌ಪೋರ್ಟ್ ಅಥವಾ ಓಸಿಐ ಕಾರ್ಡ್ ಗಳನ್ನು ಬ್ಯಾಂಕ್ ಗಳು ಇಟ್ಟುಕೊಳ್ಳುವುದು ಕಾನೂನುಬಾಹಿರ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ವ್ಯಕ್ತಿಗಳ ಪಾಸ್‌ಪೋರ್ಟ್ ಅಥವಾ ಓಸಿಐ ಕಾರ್ಡ್ಗಳನ್ನು ಬ್ಯಾಂಕ್‌ ಗಳು ತಮ್ಮ ಬಳಿ ಇಟ್ಟುಕೊಳ್ಳುವುದು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದೆ.

ಬ್ಯಾಂಕ್‌ನಿಂದ ಯಾವುದೇ ವ್ಯಕ್ತಿಯ ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ ಅನ್ನು ಉಳಿಸಿಕೊಳ್ಳುವುದು ಕಾನೂನುಬಾಹಿರ ಎಂದು ತಿಳಿಸಿದ ಕರ್ನಾಟಕ ಹೈಕೋರ್ಟ್, ವಿಡಿಬಿ ಪ್ರಾಪರ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಲ್ಲಿ ಒಬ್ಬರಾದ ಅರ್ಜಿದಾರ ಕೋಶಿ ವರ್ಗೀಸ್‌ ಅವರ ಪಾಸ್‌ಪೋರ್ಟ್ ಮತ್ತು ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ (ಓಸಿಐ) ಕಾರ್ಡ್ ಅನ್ನು ಅವರಿಗೆ ವಾಪಸ್ ಮರಳಿಸುವಂತೆ ಬ್ಯಾಂಕಿಗೆ ಸೂಚಿಸಿದೆ.

ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್‌ಗಳನ್ನು ಬ್ಯಾಂಕ್‌ನಿಂದ ಪಡೆದು ತನಗೆ ಹಸ್ತಾಂತರಿಸಲು ನಿರ್ದೇಶನ ನೀಡುವಂತೆ ಕೋರಿ ಬ್ರಿಟನ್ ಪ್ರಜೆ ವರ್ಗೀಸ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಆದೇಶ ನೀಡಿದ್ದಾರೆ.

2019 ರಲ್ಲಿ ಅರ್ಜಿದಾರರ ವಿರುದ್ಧ ಅಂದಿನ ವಿಜಯಾ ಬ್ಯಾಂಕ್, (ಈಗ ಬ್ಯಾಂಕ್ ಆಫ್ ಬರೋಡಾ), ಗೃಹ ಸಾಲದ ಖಾತೆಯನ್ನು ಮುಚ್ಚುವುದಾಗಿ ಅವರು ನೀಡಿದ ಭರವಸೆಯನ್ನು ಪಾಲಿಸದಿದ್ದಕ್ಕಾಗಿ ಆರೋಪಿ ನಂ.6 ಎಂದು ಆರೋಪಿಸಿ ಪ್ರಕರಣ ದಾಖಲಿಸಿತ್ತು. ಬ್ಯಾಂಕ್‌ನ ನಿರ್ದೇಶನದಂತೆ ಅವರು ತಮ್ಮ ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ ಅನ್ನು ಬ್ಯಾಂಕ್‌ಗೆ ಒಪ್ಪಿಸಿದ್ದರು. ಆದರೆ ನಂತರ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಅರ್ಜಿದಾರರ ಪರವಾಗಿ ತೀರ್ಪು ನೀಡಿದೆ.