ಇದು OpenAI ವತಿಯಿಂದ ಯೋಜನೆ AI ಮಾಡೆಲ್​​ಗಳಿಗೂ ಬರಲಿದೆ ಆಯಪ್ ಸ್ಟೋರ್

ನವದೆಹಲಿ : ಮೈಕ್ರೋಸಾಫ್ಟ್ ಬೆಂಬಲಿತ OpenAI ಕೃತಕ ಬುದ್ಧಿಮತ್ತೆ (AI) ಸಾಫ್ಟ್‌ವೇರ್ ಮತ್ತು ಮಾದರಿಗಳಿಗಾಗಿ ವಿಶೇಷ ಆನ್‌ಲೈನ್ ಮಾರುಕಟ್ಟೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಕಂಪನಿ ಓಪನ್ ಎಐ, ಕೃತಕ ಬುದ್ಧಿಮತ್ತೆ ಸಾಫ್ಟವೇರ್​ಗಳಿಗಾಗಿಯೇ ಮೀಸಲಾದ ಆನ್ಲೈನ್ ಆಯಪ್ ಮಾರುಕಟ್ಟೆಯೊಂದನ್ನು ತಯಾರಿಸಲು ಯೋಜಿಸುತ್ತಿದೆ

ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ತಾವು ಕಸ್ಟಮೈಸ್ ಮಾಡುವ AI ಮಾಡೆಲ್​ಗಳನ್ನು ಇತರ ವ್ಯಾಪಾರಿ ಕಂಪನಿಗಳಿಗೆ ಮಾರಾಟ ಮಾಡಬಹುದಾದ AI ಆಯಪ್ ಸ್ಟೋರ್ ಒಂದನ್ನು ಆರಂಭಿಸಲು ಸ್ಯಾಮ್ ಆಲ್ಟಮ್ಯಾನ್ ಒಡೆತನದ ಕಂಪನಿ ಓಪನ್ ಎಐ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಆದಾಗ್ಯೂ, ಮಾರುಕಟ್ಟೆಯನ್ನು ನಿರ್ಮಿಸಸುವಲ್ಲಿ ಓಪನ್ ಎಐ ಸಕ್ರಿಯ ಪ್ರಯತ್ನಗಳನ್ನು ಹೊಂದಿರುವುದಿಲ್ಲ ಎಂದು ಕಂಪನಿಯ ವಕ್ತಾರರನ್ನು ವರದಿ ಉಲ್ಲೇಖಿಸಿದೆ.

ಓಪನ್ ಎಐ ಇತ್ತೀಚೆಗೆ 175 ಮಿಲಿಯನ್ ಡಾಲರ್ ಹೂಡಿಕೆ ನಿಧಿಯೊಂದನ್ನು ಆರಂಭಿಸಿದ್ದು, ಮೈಕ್ರೋಸಾಫ್ಟ್ ಮತ್ತು ಇತರ ಹೂಡಿಕೆದಾರರ ಬೆಂಬಲದೊಂದಿಗೆ ಇತರ AI ಸ್ಟಾರ್ಟ್‌ಅಪ್‌ಗಳನ್ನು ಸಬಲೀಕರಣಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ಓಪನ್ ಎಐ ಸ್ಟಾರ್ಟ್‌ಅಪ್ ಫಂಡ್ I ಎಂದು ಕರೆಯಲ್ಪಡುವ ನಿಧಿಯು ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ದೊಡ್ಡದಾಗಿದೆ ಮತ್ತು ಮೂಲ ಯೋಜನೆಗಿಂತ 75 ಪ್ರತಿಶತ ಅಧಿಕವಾಗಿದೆ. US SEC ಫೈಲಿಂಗ್ ಪ್ರಕಾರ, ಓಪನ್ ಎಐ ಸಿಇಒ ಆಲ್ಟ್​ಮ್ಯಾನ್ ಮತ್ತು ಸಿಓಓ ಬ್ರಾಡ್ ಲೈಟ್‌ಕ್ಯಾಪ್ ಸೇರಿಕೊಂಡು ನಿರ್ವಹಿಸಲಿರುವ ಈ ನಿಧಿಯು 14 ಹೂಡಿಕೆದಾರರಿಂದ ಹಣ ಸಂಗ್ರಹಿಸಿದೆ.

ಓಪನ್ ಎಐ ಎಂಬುದು ಎಲೋನ್ ಮಸ್ಕ್, ಸ್ಯಾಮ್ ಆಲ್ಟ್‌ಮನ್, ಗ್ರೆಗ್ ಬ್ರಾಕ್‌ಮ್ಯಾನ್ ಮತ್ತು ಇಲ್ಯಾ ಸುಟ್ಸ್‌ಕೇವರ್‌ರಿಂದ 2015 ರಲ್ಲಿ ಸ್ಥಾಪಿಸಲಾದ ಕೃತಕ ಬುದ್ಧಿಮತ್ತೆ ಸಂಶೋಧನಾ ಪ್ರಯೋಗಾಲಯವಾಗಿದೆ. ಓಪನ್ ಎಐ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಮಾನವ ಕುಲಕ್ಕೆ ಸುರಕ್ಷಿತ ಮತ್ತು ಪ್ರಯೋಜನಕಾರಿಯಾದ ರೀತಿಯಲ್ಲಿ ಕೃತಕ ಸಾಮಾನ್ಯ ಬುದ್ಧಿಮತ್ತೆ (AGI) ಯನ್ನು ಸಂಶೋಧಿಸಲು ಮತ್ತು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಕೃತಕ ಸಾಮಾನ್ಯ ಬುದ್ಧಿಮತ್ತೆಯು ಸರ್ವರಿಗೂ ಪ್ರಯೋಜನ ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಓಪನ್ ಎಐ ಯ ಉದ್ದೇಶವಾಗಿದೆ.
ಓಪನ್ ಎಐ ಈಗಾಗಲೇ ಕೆಲ ಸಮಯದಿಂದ AI ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುತ್ತಿದೆ. ಈ ತಿಂಗಳ ಆರಂಭದಲ್ಲಿ ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ, ಸ್ವದೇಶಿ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು ಸಿದ್ಧರಿರುವುದಾಗಿ ಆಲ್ಟ್‌ಮ್ಯಾನ್ ಹೇಳಿದ್ದರು. ಚಾಟ್‌ಜಿಪಿಟಿ ಯನ್ನು ನಿರ್ವಹಿಸುತ್ತಿರುವ ಕಂಪನಿಯು, ಚಾಟ್​ ಜಿಪಿಟಿ 4ರ ಮುಂದಿನ ಹಂತವಾದ ಜಿಪಿಟಿ 5 ರ ತರಬೇತಿ ನೀಡುತ್ತಿಲ್ಲ ಎಂದು ಆಲ್ಟ್‌ಮ್ಯಾನ್ ಹೇಳಿದರು.

“ನಾವು ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡುತ್ತಿದ್ದೇವೆ, ಅದು ನಮಗೆ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ. ಆದರೆ, ನಮ್ಮ ಕೆಲಸ ಇನ್ನೂ ಆರಂಭಿಕ ಹಂತದಲ್ಲಿಯೂ ಇಲ್ಲ. ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಮುಂದಿನ GPT ಯ ಟೈಮ್‌ಲೈನ್ ಬಗ್ಗೆ ನಾನು ಸಾಧ್ಯವಾದರೆ ನಿಮಗೆ ಹೇಳಲು ಬಯಸುತ್ತೇನೆ” ಎಂದು ಅವರು ತಿಳಿಸಿದರು.