ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ ಐಟಿ ಉದ್ಯೋಗಿ!

ಕಾರವಾರ: ರೀಲ್ಸ್ ಮಾಡುವ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ಐಟಿ ಉದ್ಯೋಗಿಯೊಬ್ಬರು ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಸಮುದ್ರತೀರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪುಣೆ ಮೂಲದ 26 ವರ್ಷದ ಜೀವನ್ ಭಟ್ಟರಾಯಿ ಎಂಬ ಯುವಕ ಸಮುದ್ರದಲ್ಲಿ ಕೊಚ್ಚಿಹೋಗಿರುವ ವ್ಯಕ್ತಿ. ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಐದು ಮಂದಿ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಕುಮಟಾಕ್ಕೆ ಬಂದಿದ್ದು, ಕಳೆದ ಮೂರು ದಿನಗಳಿಂದ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದರು.

ಭಾನುವಾರ ರೆಸಾರ್ಟ್‌ನಿಂದ ಚೆಕ್‌ಔಟ್ ಮಾಡುವ ಮುನ್ನ ಸ್ನೇಹಿತರೊಂದಿಗೆ ಕಡ್ಲೆ ಸಮುದ್ರತೀರಕ್ಕೆ ತೆರಳಿದ್ದ ಜೀವನ್, ರೀಲ್ಸ್ ಚಿತ್ರೀಕರಣಕ್ಕಾಗಿ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಪ್ರಬಲ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿಹೋಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕರಾವಳಿ ಕಾವಲುಪಡೆ, ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದು, ಯುವಕನಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ. ಆದರೆ ಈವರೆಗೂ ಜೀವನ್ ಪತ್ತೆಯಾಗಿಲ್ಲ.

ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.