ಬೆಂಗಳೂರು: ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಭಾಷ್ಯಂ ಸರ್ಕಲ್ನಲ್ಲಿರುವ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮತ್ತು ಕಚೇರಿ ಸೇರಿ 4 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಉಮೇಶ್ ಅವರು ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ರೀತಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಶಿವಮೊಗ್ಗ ಜಿಲ್ಲೆ ಆಯನೂರು ನಿವಾಸಿಯಾಗಿರುವ ಉಮೇಶ್, ಆರಂಭದಲ್ಲಿ ಕೆಲಕಾಲ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಅವರ ಆಪ್ತ ಸಹಾಯಕನಾಗಿದ್ದರು. 2012ರಿಂದಲೂ ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದರು.
ಉಮೇಶ್ ಈಗಲೂ ಕೂಡ ಸರ್ಕಾರಿ ವಾಹನವನ್ನ ಬಳಸುತ್ತಿದ್ದಾರೆ. ವರ್ಗಾವಣೆ, ಕಡತ ವಿಲೇವಾರಿಯಂತಹ ಕೆಲಸ ಉಮೇಶ್ ಮಾಡುತ್ತಿದ್ದರು ಅನ್ನೋ ಆರೋಪಗಳು ಇವೆ. ನೀರಾವರಿ ಇಲಾಖೆಯ ಪ್ರಮುಖ ಕಡತಗಳನ್ನ ವಿಲೇವಾರಿ ಮಾಡುತ್ತಿದ್ದ ಅನ್ನೋ ಆರೋಪವೂ ಈತನ ಮೇಲಿದೆ.
ದಾಖಲೆ ವಶಕ್ಕೆ:
ಉಮೇಶ್ ಮನೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳನ್ನು ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚೀಲಗಳಲ್ಲಿ ಮೂಟೆ ಕಟ್ಟಿ ದಾಖಲೆಗಳನ್ನು ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಜಲ ಸಂಪನ್ಮೂಲ ಇಲಾಖೆಯ ಬೃಹತ್ ನೀರಾವರಿ ಯೋಜನೆಗಳ ಕಾಮಗಾರಿ ನಿರ್ವಹಿಸುತ್ತಿರುವ ಹಲವು ಗುತ್ತಿಗೆದಾರರ ಮೇಲೂ ಐ.ಟಿ ದಾಳಿ ನಡೆದಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಕಾಮಗಾರಿಗಳ ಗುತ್ತಿಗೆಯಲ್ಲಿ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂಬ ಮಾಹಿತಿ ಲಭಿಸಿದೆ.
ಗುತ್ತಿಗೆದಾರರಿಗೆ ಸೇರಿದ ಸ್ಥಳಗಳಿಂದಲೂ ಬೃಹತ್ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಮುಂದುವರಿದಿದೆ.
ರಾಜಾಜಿನಗರದ ರಾಮಮಂದಿರ ಪ್ರದೇಶದಲ್ಲಿರುವ ಉಮೇಶ್ ಮನೆ, ನಾಗಸಂದ್ರದಲ್ಲಿ ಉಮೇಶ್ ಹೊಂದಿರುವ ಧವಳಗಿರಿ ಹೆಸರಿನ ಮನೆ, ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಲೆಕ್ಕ ಪರಿಶೋಧಕಿಯೊಬ್ಬರ ಮನೆ, ಗುತ್ತಿಗೆದಾರರಾದ ಡಿ.ವೈ. ಉಪ್ಪಾರ್, ಎ.ವೈ. ಕಟ್ಟೀಮನಿ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ.