ಉಡುಪಿ: ಉಮರ್ ಖಾಲಿದ್ ಪರ ಘೋಷಣೆಗಳು ಕೇಳಿಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕರ್ನಾಟಕದ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿವೆ. ಉಮರ್ ಖಾಲಿದ್ ಒಬ್ಬ ಭಯೋತ್ಪಾದಕ.
ಸುಪ್ರೀಂ ಕೋರ್ಟ್ ಕೂಡ ಜಾಮೀನು ನೀಡಿದರೆ ಅನಾಹುತ ಸಂಭವಿಸಬಹುದು ಎಂಬ ಕಾರಣದಿಂದ ಜಾಮೀನು ನೀಡಿಲ್ಲ. ಅಫ್ಜಲ್ ಗುರು ಪರವೂ ಹೋರಾಟ ನಡೆಸಿದ ವ್ಯಕ್ತಿ ಆತ” ಎಂದು ಆರೋಪಿಸಿದರು.
“ಕಾಂಗ್ರೆಸ್ ಬೆಂಬಲಿತ ಹೋರಾಟದಲ್ಲಿ ಉಮರ್ ಖಾಲಿದ್ ಪರ ಫ್ಲೆಕ್ಸ್ ಪ್ರತ್ಯಕ್ಷವಾಗಿದೆ. ಇದನ್ನು ಕಾಂಗ್ರೆಸ್ ಬೆಂಬಲಿಸುತ್ತಿರುವುದು ಭಯೋತ್ಪಾದಕರಿಗೆ ನೇರ ಬೆಂಬಲ ನೀಡಿದಂತಾಗಿದೆ” ಎಂದು ಹೇಳಿದರು.
ಗೃಹ ಮಂತ್ರಿ ಪ್ರಿಯಾಂಕ ಖರ್ಗೆಯವರೇ ನಿಮ್ಮ ಪೊಲೀಸರನ್ನೆ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ. ಬೆದರಿಕೆ ಹಾಕುವ ಕೆಲಸವೂ ನಡೆದಿದೆ. ಇದೆಲ್ಲವನ್ನೂ ನೋಡಿದರೆ ಕಾಂಗ್ರೆಸ್‌ನ ಮಾನಸಿಕ ಸ್ಥಿತಿ ಭಯೋತ್ಪಾದಕರನ್ನು ಬೆಂಬಲಿಸುವಂತಾಗಿದೆ ಎಂದು ಆರೋಪಿಸಿದರು.















