ದುಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯಂತೆ ಇರಾನಿನ ಇಂಧನ ಸೌಲಭ್ಯಗಳ ಮೇಲೆ ದಾಳಿ ನಡೆದರೆ, ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಭಾನುವಾರ ಎಚ್ಚರಿಕೆ ನೀಡಿದೆ. ಹೊರ್ಮುಜ್ ಜಲಸಂಧಿಯನ್ನು 48 ಗಂಟೆಗಳ ಒಳಗಾಗಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ, ಇರಾನ್‌ನ ಅತಿದೊಡ್ಡ ವಿದ್ಯುತ್ ಸ್ಥಾವರದಿಂದ ಆರಂಭಿಸಿ ಎಲ್ಲ ಸ್ಥಾವರಗಳನ್ನು ನಾಶ ಮಾಡಲಾಗುವುದು’ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು.
ಪಶ್ಚಿಮ ಏಷ್ಯಾದಲ್ಲಿನ ಯುದ್ಧವನ್ನು ಶೀಘ್ರವೇ ಮುಕ್ತಾಯಗೊಳಿಸುವುದಾಗಿ ಒಂದು ದಿನದ ಹಿಂದಷ್ಟೇ ಹೇಳಿದ್ದ ಟ್ರಂಪ್, ಇದೀಗ ಈ ರೀತಿ ಹೇಳಿರುವುದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬೆದರಿಕೆಗೆ ಬಗ್ಗದ ಇರಾನ್, ಜಲಮಾರ್ಗವನ್ನು ಸಂಪೂರ್ಣ ಬಂದ್ ಮಾಡುವುದಾಗಿ ತಿರುಗೇಟು ನೀಡಿದೆ. ಇರಾನ್‌ನ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದೇ ಆದರೆ, ಅಮೆರಿಕದ ಷೇರುಗಳಿರುವ ಕಂಪನಿಗಳನ್ನು ಸಂಪೂರ್ಣ ನಾಶಮಾಡಲಾಗುವುದು. ಅಮೆರಿಕವು ನೆಲೆಗಳನ್ನು ಹೊಂದಿರುವ ದೇಶಗಳ ಇಂಧನ ಸೌಕರ್ಯಗಳು ಕಾನೂನುಬದ್ಧವಾಗಿ ನಮ್ಮ ಗುರಿಯಾಗಲಿವೆ’ ಎಂಬುದಾಗಿಯೂ ರೆವಲ್ಯೂಷನರಿ ಗಾರ್ಡ್ಸ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.















