ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರ್ಜಾಲ ಸುರಕ್ಷತೆಯ ಕುರಿತು ಅರಿವು ಕಾರ್ಯಕ್ರಮ

ಉಡುಪಿ : ಚೈಲ್ಡ್ ಲೈನ್-1098, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ರೋಟರಿ ಉಡುಪಿ ಇವರ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಅಂಗವಾಗಿ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂಜಿಬೆಟ್ಟು ಇಲ್ಲಿ ಆನ್‍ಲೈನ್ ಸುರಕ್ಷತೆಯ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲ ಕೆ.ಎಮ್.ಸಿಯ ಫಾರೆನ್ಸಿಕ್ ಇಲಾಖೆಯ ಉಪನ್ಯಾಸಕ ಡಾ.ಅಶ್ವಿನಿ ಕುಮಾರ್ ಮಾತನಾಡಿ , ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಕ್ಕೆ ಬಲಿಯಾಗಬಾರದು ಎಂದು ಸೈಬರ್ ಅಪರಾಧದಿಂದಾಗುವ ತೊಂದರೆಗಳನ್ನು ಸವಿಸ್ತಾರವಾಗಿ ಮಕ್ಕಳಿಗೆ ತಿಳಿಸಿದರು ಮತ್ತು ಆನ್‍ಲೈನ್ ಕ್ರೈಂ ಬಗ್ಗೆ ನಿಮಿಷದಲ್ಲೇ ದೂರು ನೀಡುವುದು ಹೇಗೆ ಎನ್ನುವ ಮಾಹಿತಿ ನೀಡಿದರು. ಮೊಬೈಲ್ ಬಳಕೆಯಿಂದ ಆಗುವ ತೊಂದರೆಗಳ ಕುರಿತು ತಿಳಿ ಹೇಳಿದ ಅವರು ಅನಗತ್ಯವಾದ ಸಾಮಾಜಿಕ ಜಾಲತಾಣಗಳ ಕುರಿತಾದ ಚಟುವಟಿಕೆಗಳಿಂದ ದೂರವಿರುವಂತೆ ಎಚ್ಚರಿಸಿದರು. ಮಕ್ಕಳು ಅಪರಿಚಿತರ ಕುರಿತಾಗಿ ಸದಾ ಎಚ್ಚರದಿಂದ ಇರಬೇಕು ಎಂದು ಹೇಳಿದರು. ಅಲ್ಲದೇ ಯಾವುದೇ ರೀತಿಯಾದ ಸಮಸ್ಯೆಯಾದಲ್ಲಿ ಚೈಲ್ಡ್ ಲೈನ್ 1098 ಇದಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯಲು ತಿಳಿಸಿದರು.

ಚೈಲ್ಡ್ ಲೈನ್ -1098 ಉಡುಪಿಯ ನಿರ್ದೆಶಕ ರಾಮಚಂದ್ರ ಉಪಾಧ್ಯಾಯರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತವಿಕ ನುಡಿಗಳನ್ನಾಡುವುದರ ಮೂಲಕ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಿಂದ ದೂರವಿರುವಂತೆ ತಿಳಿಸಿದರು.

ಚೈಲ್ಡ್ ಲೈನ್- 1098 ಉಡುಪಿಯ ಆಪ್ತ ಸಮಾಲೋಚಕಿ ಕು.ನಯನ ಚೈಲ್ಡ್ ಲೈನ್-1098 ರ ಬಗ್ಗೆ ಹಾಗೂ ಮಕ್ಕಳು ಯಾವ ಸಂದರ್ಭದಲ್ಲಿ ಚೈಲ್ಡ್ ಲೈನ್-1098 ಗೆ ಕರೆಮಾಡಬೇಕು ಎಂದು ತಿಳಿಸಿದರು.

ಅಂರ್ತಜಾಲ ಸುರಕ್ಷತೆಯ ಕುರಿತು ಭಿತ್ತಿಪತ್ರ ರಚಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಚೈಲ್ಡ್ ಲೈನ್-1098 ಉಡುಪಿಯ ಸಹನಿರ್ದೆಶಕ ಗುರುರಾಜ್ ಭಟ್, ಮತ್ತು ಶ್ರೀಮತಿ ಸುಹಾನಿ ಕಾಮತ್ ಚೈಲ್ಡ್ ಲೈನ್ ಕೇಂದ್ರ ಸಂಯೋಜಕರು, ಹಾಗೂ ಸಿಬ್ಬಂದಿಗಳು, ಮತ್ತು ಶ್ರೀಮತಿ ವಿನೋದಾ ಶೆಟ್ಟಿ ಮುಖ್ಯೋಪಾಧ್ಯಾರು, ಟಿ.ಎ.ಪೈ, ಆಂಗ್ಲ ಮಾಧ್ಯಮ ಶಾಲೆ ಕುಂಜಿಬೆಟ್ಟು ಮತ್ತು ಶಿಕ್ಷಕ ವೃಂದದವರು, ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಚೈಲ್ಡ್ ಲೈನ್-1098 ಸಿಬ್ಬಂದಿ ಶ್ರೀಮತಿ ಮೋಹಿನಿ ಕಾರ್ಯಕ್ರಮವನ್ನು ನಿರೂಪಿಸಿ, ರೋಟರಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ್ ಸ್ವಾಗತಿಸಿ, ಚೈಲ್ಡ್ ಲೈನ್ ಸಿಬ್ಬಂದಿ ಕು. ರೇಷ್ಮಾ ವಂದಿಸಿದರು.