ಉಡುಪಿ: ರಾಜಕೀಯ ಕ್ಷೇತ್ರ, ದೇಗುಲದ ಆಡಳಿತ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಮಹಿಳೆಯರ ಮಾತು, ನಿರ್ಣಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಮಹಿಳೆಯರು ಸಮಾಜದಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸರ್ಕಾರ ಸಹಿತ ಮಹಿಳೆಯರು ಇರುವ ಸಂಘಟನೆಗಳು ಮಹಿಳೆಯರ ಭಾವನೆ, ಮಾತು ಹಾಗೂ ನಿರ್ಣಯಕ್ಕೆ ಗೌರವ ಕೊಡುವ ಕೆಲಸ ಮಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ತ್ರೀಶಕ್ತಿ ಒಕ್ಕೂಟ ಹಾಗೂ ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಹಾಗೂ ಪುರುಷರ ನಡುವೆ ಅಜಗಜಾಂತರ ವ್ಯತ್ಯಾಸ ಇದೆ. ಪುರುಷರ ಅನುಕಂಪ ಮಹಿಳೆಯರಿಗೆ ಬೇಕಾಗಿಲ್ಲ. ಬುದ್ಧಿವಂತಿಕೆ, ವಿದ್ಯೆ, ಸಾಮರ್ಥ್ಯದ ವಿಚಾರದಲ್ಲಿ ಮಹಿಳೆಯರು ಕೂಡ ಪುರುಷರಷ್ಟೇ ಬಲಾಢ್ಯರಾಗಿದ್ದಾರೆ. ಆದ್ದರಿಂದ ಮಹಿಳೆಯರ ಹೃದಯ, ನೋವು, ಭಾವನೆಗಳನ್ನು ಪುರುಷರು ಅರ್ಥಮಾಡಿಕೊಳ್ಳಬೇಕು. ಹಾಗಾದಲ್ಲಿ ಬಹಳಷ್ಟು ಕುಟುಂಬಗಳಲ್ಲಿ ಸಮಸ್ಯೆಯೇ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರಿಗೆ ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಶಕ್ತಿ ಇದೆ. ಮನೆಯೊಳಗೆ ಹಾಗೂ ಹೊರಗೆ ಎರಡು ಕಡೆಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಇರುವುದು ಮಹಿಳೆಯರಿಗೆ ಮಾತ್ರ. ಮಹಿಳೆಯರು ಸಮಾನತೆ ಬಯಸುತ್ತಿಲ್ಲ, ಅವರ ಘನತೆಯನ್ನು ಹೆಚ್ಚಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟಕ್ಕೆ ನಗರ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ನೀಡುವ ಕುರಿತಂತೆ ಕಾನೂನಿನ ತೊಡಕಿದೆ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಮಹಿಳಾ ಒಕ್ಕೂಟಕ್ಕೆ ನಿವೇಶನ ಮಂಜೂರು ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಇದೆ. ಹಿಂದೆ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆಯರು ಇಂದು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿಯೂ ಸದೃಢರಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿ.ಪಂ. ಸದಸ್ಯರಾದ ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ, ರೇಶ್ಮಾ ಉದಯ್ ಕೋಟ್ಯಾನ್, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿ.ಪಂ. ಸಿಇಒ ಸಿಂಧು ಬಿ. ರೂಪೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್, ಕಾರ್ಯದರ್ಶಿ ವಸಂತಿ ಕೊರ್ಡ್ಕಲ್ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸ್ಸಿ ಗೊನ್ಸಾಲ್ವಿಸ್ ಸ್ವಾಗತಿಸಿದರು.