ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ: ಆದೇಶ ಹಿಂಪಡೆದ ಸರ್ಕಾರ

ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆದಿದೆ.

ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟನೆ ನೀಡಿದ್ದು, ಸಣ್ಣ ಉಳಿತಾಯ ಯೋಜನೆಗಳ ಮೇಲೆ ಗರಿಷ್ಠ ಶೇ1.1ರವರೆಗೆ ಬಡ್ಡಿ ಇಳಿಕೆ ಮಾಡಲಾಗಿತ್ತು. ಆದರೆ ಈಗ ಅದರಲ್ಲಿ ಬದಲಾವಣೆ ಮಾಡಲಾಗಿದ್ದು, ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು 2020–21ರ ನಾಲ್ಕನೇ ತ್ರೈಮಾಸಿಕದಲ್ಲಿ, ಅಂದರೆ 2021ರ ಮಾರ್ಚ್‌ ವರೆಗೆ ಇದ್ದ ದರಗಳು ಮುಂದುವರಿಯಲಿವೆ’ ಎಂದಿದ್ದಾರೆ.

ಬಡ್ಡಿದರ ಪರಿಷ್ಕೃತಗೊಳಿಸಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದಿನ ಆದೇಶದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), ಪಿಪಿಎಫ್‌, ನಿಗದಿತ ಠೇವಣಿ, ಉಳಿತಾಯ ಖಾತೆ ಸೇರಿದಂತೆ ಬಹುತೇಕ ಎಲ್ಲ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಇಳಿಕೆ ಮಾಡಲಾಗಿತ್ತು. ಪರಿಷ್ಕೃತ ಬಡ್ಡಿ ದರಗಳು ಏಪ್ರಿಲ್‌ 1ರಿಂದ ಅನ್ವಯ ಆಗಲಿದ್ದು, ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ (2021ರ ಜೂನ್‌ 30ರವರೆಗೆ) ಜಾರಿಯಲ್ಲಿ ಇರಲಿವೆ ಎಂದು ಪ್ರಕಟಿಸಲಾಗಿತ್ತು.