ಚೆನೈ/ ಮುಂಬೈ : ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ದೇಶದ ಆರು ರಾಜ್ಯಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ , ದೆಹಲಿ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ಎನ್ಐಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಎನ್ಐಎ ಅಧಿಕಾರಿಗಳು ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮುಖಂಡರ ಮನೆ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ವರ್ಷ ಪ್ರಧಾನಿ ನರೇಂದ್ರ ಮೋದಿ ಬಿಹಾರ ಭೇಟಿ ವೇಳೆ ಗಲಭೆ ನಡೆಸಲು ಸಂಚು ರೂಪಿಸಿದ ಆರೋಪ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ದೇಶದ ವಿವಿದೆಡೆ ದಾಳಿ ನಡೆಸಿದ್ದಾರೆ.
ತಮಿಳುನಾಡಿನಲ್ಲಿ ಎನ್ಐಎ ದಾಳಿ : ತಮಿಳುನಾಡಿನ ಮಧುರೈ ಜಿಲ್ಲೆಯ ಹಲವು ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಕಜಿಮಾರ್ ಸ್ಟ್ರೀಟ್ನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಜಮಾತ್ ಹಿಂದ್ ಮೂವ್ಮೆಂಟ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತಾಜುದ್ದೀನ್ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಘಟನೆ ಹಲವರು ಸರ್ಕಾರದ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವುದಾಗಿ ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಬಾಂಬ್ ಸ್ಫೋಟ ಆರೋಪಿ ಮನೆಯಲ್ಲಿ ಶೋಧ : ಮಹಾರಾಷ್ಟ್ರದ ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 2006ರ ಮುಂಬೈ ರೈಲ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ವಾಹಿದ್ ಶೇಖ್ನ ಮನೆ ಮೇಲೆ ಎನ್ಐಎ ದಾಳಿ ನಡೆಸಿದೆ. ವಿಖ್ರೋಲಿಯಲ್ಲಿರುವ ಆರೋಪಿಯ ಮನೆಯಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.
ದೆಹಲಿಯ ನ್ಯೂಸ್‌ಕ್ಲಿಕ್ ಕಚೇರಿಯಲ್ಲಿ ಸಿಬಿಐ ಶೋಧ : ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಉಲ್ಲಂಘನೆ ಸಂಬಂಧ ನ್ಯೂಸ್‌ಕ್ಲಿಕ್ ವೆಬ್ ಪೋರ್ಟಲ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಈ ಸಂಬಂಧ ಬುಧವಾರ ಕೇಂದ್ರ ತನಿಖಾ ದಳ(ಸಿಬಿಐ) ನ್ಯೂಸ್‌ಕ್ಲಿಕ್ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಮುಂಬೈ ಸ್ಫೋಟ ಪ್ರಕರಣ ಸಂಬಂಧ ಅಬ್ದುಲ್ ವಾಹಿದ್ ಶೇಖ್ನಲ್ಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ. ಆದರೆ ನಿಷೇಧಿತ ಪಿಎಫ್ಐ ಸಂಘಟನೆ ಜೊತೆ ನಂಟು ಹೊಂದಿರುವ ಶಂಕೆ ಹಿನ್ನೆಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.ಆರು ರಾಜ್ಯಗಳಲ್ಲಿ ಎನ್ಐಎ ಕಾರ್ಯಾಚರಣೆ : ದೇಶದ ಆರು ರಾಜ್ಯಗಳಲ್ಲಿ ಎನ್ಐಎ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ರಾಜಸ್ಥಾನದ ಟೋಂಕ್, ಕೋಟಾ, ಗಂಗಾಪುರ್ ಮತ್ತು ದೆಹಲಿಯ ಹೌಝ್ ಕಾಜಿ, ಬಲ್ಲಿಮಾರನ್ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಮಹಾರಾಷ್ಟ್ರದಲ್ಲಿ ಮುಂಬೈ, ಥಾಣೆ, ನವಿ ಮುಂಬೈ, ಭೀವಂಡಿ ಜಿಲ್ಲೆಗಳಲ್ಲೂ ಎನ್ಐಎ ಆಧಿಕಾರಿಗಳು ಶೋಧ ನಡೆಸಿದ್ದಾರೆ. ಇದುವರೆಗೆ ಐದರಿಂದ ಏಳು ಜನರನ್ನು ಬಂಧಿಸಿದೆ ಎಂದು ವರದಿಯಾಗಿದೆ.