ಮಲಾಡ್: ಸಾಂಸ್ಕೃತಿಕ ಸಂಸ್ಕಾರ ಸಮೃದ್ಧ ಜೀವನ ಕಲೆಯನ್ನು ಪೌರಾಣಿಕ ನೀತಿ ಪಾಠದ ಮೂಲಕ ಕಲಿಸುವ ಕಲೆ ಯಕ್ಷಗಾನ . ಕರಾವಳಿ ಕರ್ನಾಟಕದ ಸಮೃದ್ಧ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹಾನಗರದಲ್ಲಿ ಯಕ್ಷಗಾನ ಕಲೆಯನ್ನು ಸಮೃದ್ಧಗೊಳಿಸುವ ಕಾಯಕ ಸಂಘ ಸಂಸ್ಥೆಗಳಿಂದ ನಡೆಯಬೇಕು ಎಂದು ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಅಡ್ವೋಕೇಟ್ ಜಗದೀಶ್ ಎಸ್ ಹೆಗ್ಡೆ ಹೇಳಿದರು.
ಮಲಾಡ್ ಪಶ್ಚಿಮದ ಲಿಂಕ್ ರೋಡ್ ಎವರ್ ಶೈನ್ ನಗರದ ಹೋಟೆಲ್ ಸಾಯಿ ಪ್ಯಾಲೇಸ್ ಗ್ರಾಂಡ್ ನಲ್ಲಿ ಮಲಾಡ್ ಕನ್ನಡ ಸಂಘ ಮತ್ತು ರವಿ ಶೆಟ್ಟಿ ಸಹೋದರ ಸಹಯೋಗದಿಂದ ಅಜೆಕಾರು ಕಲಾಭಿಮಾನಿ ಬಳಗದವರಿಂದ ಜರುಗಿದ ಯಕ್ಷಗಾನ ತಾಳಮದ್ದಳೆ ಕಚ-ದೇವಯಾನಿ ಕಾರ್ಯಕ್ರಮದ ಮಧ್ಯಂತರ ವಿರಾಮದ ಕಿರುಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮಲಾಡ್ ಪರಿಸರದಲ್ಲಿ ಭಾಷೆ ಸಂಸ್ಕೃತಿಯನ್ನು ಬೆಳೆಸುವ ದೃಷ್ಟಿಯಿಂದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ವೈದ್ಯಕೀಯ ಶಿಬಿರದಂತಹ ಜನಪರ ಕಾರ್ಯಕ್ರಮಗಳ ಮೂಲಕ ಸದಸ್ಯರನ್ನು ಒಗ್ಗೂಡಿಸಿ ಸಾಮರಸ್ಯದ ಮೂಲಕ ಪರಿಸರದ ತುಳು ಕನ್ನಡಿಗರ ಜನಸ್ನೇಹಿ ಸಂಸ್ಥೆಯಾಗಿ ಬೆಳೆದಿದೆ. ದಾನಿಗಳ ಸಹಾಯದಿಂದ ಜರುಗುವ ಇಂತಹ ಕಾರ್ಯ ಚಟುವಟಿಕೆಗಳಿಗೆ ಸದಸ್ಯರ ಬೆಂಬಲ ದೊರಕುತ್ತಿದೆ ನಾವೆಲ್ಲರೂ ಸಂಘವನ್ನು ಇನ್ನಷ್ಟು ಬಲಿಷ್ಠವಾಗಿ ಬೆಳಸೋಣ. ಆ ಮೂಲಕ ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸೋಣ ಎಂದರು.
ಯಕ್ಷಗಾನ ಕಲಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸಾಯಿ ಪ್ಯಾಲೇಸ್ ಗ್ರಾಂಡ್ ನ ಉದಯ ಶೆಟ್ಟಿ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಗನ್ನು ಆಯೋಜಿಸುವ ಸಂಸ್ಥೆಗಳಿಗೆ ಸ್ಥಳಾವಕಾಶ ಸಹಕಾರ ನೀಡುವುದಾಗಿ ಹೇಳಿದ ಅವರು ಮಹಾನಗರದಲ್ಲೂ ಯಕ್ಷಗಾನ ಕಲೆಯನ್ನು ಶ್ರೀಮಂತಗೊಳಿಸುವ ಅಜೆಕಾರು ಕಲಾಭಿಮಾನಿ ಬಳಗದ ತಂಡವನ್ನು ಪ್ರಶಂಸಿದರು. ಜೊತೆಗೆ ಕಾಪು ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಬಹುದೊಡ್ಡ ಯೋಜನೆಗೆ ಎಲ್ಲರೂ ಸಹಕರಿಸಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸದಸ್ಯರನ್ನು ಸಂಘದ ವತಿಯಿಂದ ಹಾಗೂ ಉದಯಶೆಟ್ಟಿ ಹಾಗೂ ಇತರ ಗಣ್ಯರು ಗೌರವ ಪೂರ್ವಕವಾಗಿ ಅಭಿನಂದಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷದಯಾನಂದ ಎಮ್ ಶೆಟ್ಟಿ, ಕಲಾಪೋಷಕ, ಬಾಂಬೆ ಬಂಟ್ಸ್ ಎಸೋಶಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ, ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಮುಂಡ್ಕೂರು ರತ್ನಾಕರ್ ಶೆಟ್ಟಿ , ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್ ಪಯ್ಯಡೆ, ಇನ್ನಿತರ ಹಲವಾರು ಗಣ್ಯರು ಮಲಾಡ್ ಕನ್ನಡ ಸಂಘದ ಜತೆ ಕಾರ್ಯದರ್ಶಿ ಜಯಪ್ರಕಾಶ್ ಸಾಲ್ಯಾನ್ ಜತೆ ಕೋಶಾಧಿಕಾರಿ ಸಂತೋಷ್ ಎಸ್ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತಾ ವಿ ಭಂಡಾರಿ, ಕಾರ್ಯದರ್ಶಿ ಮಲ್ಲಿಕ ರೈ ಕಾರ್ಯ ಕಾರಿ ಸಮಿತಿ ಸದಸ್ಯರು, ಯುವ ವಿಭಾಗದ ಸದಸ್ಯರು, ವಿವಿಧ ಉಪ ಸಮಿತಿಯ ಕಾರ್ಯಾಧ್ಯಕ್ಷರುಗಳು ವಿಸ್ವಸ್ಥರು ಉಪಸ್ಥಿತರಿದ್ದರು.
ಅಜೆಕಾರು ಕಲಾಭಿಮಾನಿ ಬಳಗದ ಪರವಾಗಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಜಗದೀಶ್ ಹೆಗ್ಡೆ ಅವರನ್ನು ಗೌರವಿಸಲಾಯಿತು.
ಗೌರವ ಕಾರ್ಯದರ್ಶಿ ಆಶಾಲತ ಎಸ್ ಕೋಟ್ಯಾನ್ ಸಂಘದ ಹಿನ್ನೆಲೆ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಾಸವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಂತರ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿರಚಿತ ಯಕ್ಷಗಾನ ತಾಳಮದ್ದಳೆ ಕಚ ದೇವಯಾನಿ ಯಶಸ್ವಿಯಾಗಿ ಜರುಗಿತು. ಹಿಮ್ಮೇಳದಲ್ಲಿ ಚೆಂಡೆ ಪ್ರಶಾಂತ್ ಶೆಟ್ಟಿ ವಗನಾಡು ಮದ್ದಳೆ ಕೌಶಲ್ ರಾವ್ ಪುತ್ತಿಗೆ ಪ್ರಮುಖ ಅರ್ಥದಾರಿಗಳಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಹರೀಶ್ ಭಟ್ ಬೊಳಂತಿ ಮೊಗರು , ಪಕಳಪುಂಜ ಶ್ಯಾಂ ಭಟ್ ಪ್ರಶಾಂತ್ ಶೆಟ್ಟಿ ಕಾರ್ಕಳ, ಅವಿನಾಶ್ ಶೆಟ್ಟಿ ಉಮರಡ್ಕ. ಹಿಮ್ಮೇಳದಲ್ಲಿ ಉದಯೋನ್ಮುಖ ಭಾಗವತ ಸಿದ್ಧಕಟ್ಟೆ ಭರತ್ ಶೆಟ್ಟಿ ಅವರ ಕಂಠಸಿರಿ ಭಾಗವತಿಗೆ ಕಲಾ ರಸಿಕರನ್ನು ಯಕ್ಷಲೋಕದಲ್ಲಿ ತಲ್ಲೀನಗೊಳಿಸಿತು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಚಿತ್ರ ವರದಿ: ರಮೇಶ್ ಉದ್ಯಾವರ