ಪರಶುರಾಮ ಪ್ರತಿಮೆ ವಿಚಾರದಲ್ಲಿ ಅಪಪ್ರಚಾರ ಮಾಡುವ ಬದಲು ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸಲಿ: ಕುಯಿಲಾಡಿ ಸುರೇಶ್ ನಾಯಕ್ ಸವಾಲು

ಉಡುಪಿ: ಪರಶುರಾಮನ ಪ್ರತಿಮೆ ವಿಚಾರದಲ್ಲಿ ಆಧಾರ ರಹಿತ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ಸಿಗೆ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿಸಲು ಯಾಕೆ ಮನಸ್ಸು ಮಾಡುತ್ತಿಲ್ಲ. ಜನತೆಯ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ಕಾಂಗ್ರೆಸಿಗರು ಹಾದಿ ಬೀದಿಗಳಲ್ಲಿ ಬೊಬ್ಬೆ ಹೊಡೆಯುವ ಬದಲು ಅಗತ್ಯ ವಿಚಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಲು ಒತ್ತು ನೀಡುವುದು ಉತ್ತಮ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತ ನಡೆಸುತ್ತಿದೆ. ತನಿಖಾ ಸಂಸ್ಥೆಗಳು, ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು ತಮ್ಮ ಅಧೀನದಲ್ಲಿದೆ. ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸಿಗರಿಗೆ ಏನಾದರೂ ಸಂಶಯಗಳಿದಲ್ಲಿ ಸಂಬಂಧಪಟ್ಟ ಇಲಾಖೆ ಮೂಲಕ ತನಿಖೆ ಮಾಡುವುದು ಬಿಟ್ಟು ಸುಮ್ಮನೆ ಕಾಲಹರಣ ಮಾಡುತ್ತಿದೆ.

ಕಾಂಗ್ರೆಸ್ಸ್ ಪಕ್ಷದ ನಾಯಕರು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಹಾಗೂ ತನ್ನ ಹೈ ಕಮಾಂಡ್ ಗೆ ಮನೆಯಲ್ಲಿ ಕೂಡಿಟ್ಟ ಕೋಟಿ ಕೋಟಿ ಹಣದ ಕಂತೆಗಳು ಐಟಿ ತನ್ನ ಸುಪರ್ದಿಗೆ ತೆಗೆದುಕೊಂಡ ಬಳಿಕ ಜನರನ್ನು ದಾರಿ ತಪ್ಪಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದೂರಾಲೋಚನೆಯಿಂದ ಇಂತಹ ಇಲ್ಲ ಸಲ್ಲದ ವಿಚಾರಗಳಲ್ಲಿ ಆರೋಪ ಮಾಡುತ್ತಿರುವುದು ವಿಪರ್ಯಾಸ. ಪ್ರಸ್ತುತ ರಾಜ್ಯದಲ್ಲಿ ತನ್ನ ಗ್ಯಾರೆಂಟಿ ಘೋಷಣೆಗೆ ಹಣವಿಲ್ಲದೆ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಹೊಸ ಕಾರ್ಯಗಳು ಹಳ್ಳ ಹಿಡಿಯುತ್ತಿರುವ ಈ ಸಂದರ್ಬದಲ್ಲಿ ಜನರ ಭಾವನೆಗಳನ್ನು ಕೆರಳಿಸುವ ನೀಚ ಕೃತ್ಯಕ್ಕೆ ಕಾಂಗ್ರೆಸ್ಸ್ ಇಳಿದಿದೆ.

ರೈತರ ಹೊಲಕ್ಕೆ ಹಾಗೂ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡುವ ಹಾಗೂ ಬರ ಪರಿಹಾರ ಹಾಗೂ ಬರ ಅಧ್ಯಯನ ಮಾಡಲು ಸಮಯ ನೀಡುವ ಬದಲಿಗೆ ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ತನ್ನ ಸಚಿವರ ಹಿಂಡನ್ನು ಕರೆದುಕೊಂಡು ಸಮಯ ಕಳೆಯುವ ಈ ಸೋ ಕಾಲ್ಡ್ ಸಮಾಜವಾದಿ ನಾಯಕರಿಗೆ ಜನರ ಕಷ್ಟ ಅಳಿಸಲು ಸಮಯ ಇಲ್ಲವಾಗಿರುವುದು ನಮ್ಮ ವಿಪರ್ಯಾಸ.

ಶಾಸಕ ಸುನಿಲ್ ಕುಮಾರ್ ಅವರೇ ಸ್ವತಃ ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯಲ್ಲೂ ತನಿಖೆ ನಡೆಸಿ ಎಂದರೂ ಕಾಂಗ್ರೆಸ್ಸ್ ಮಾತ್ರ ಇದಕ್ಕೆ ಮೀನಾಮೇಷ ಎಣಿಸುತ್ತಿದೆ, ಕೇವಲ ಬಾಯಿ ಚಪಲಕ್ಕೆ ಹಾಗೂ ರಾಜಕೀಯ ಲಾಭಕ್ಕಾಗಿ ಆರೋಪ ಮಾಡುತ್ತಿರುವುದು ಬಿಟ್ಟರೆ ಇವರ ಅಪಪ್ರಚಾರದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಜನತೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.