ಮಂಗಳೂರು: ಪೂರ್ವಾನುಮತಿ ಇಲ್ಲದೆ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಕೆ; ತೆರವಿಗೆ ಸೂಚನೆ

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟಿನಲ್ಲಿ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಹರೇಕಳ ಕಚೇರಿ ಬಳಿ ಟಿಪ್ಪು ಸುಲ್ತಾನ್ ಕಟೌಟ್ ಹಾಕಲಾಗಿದೆ. ಇದೀಗ ಅದನ್ನು ತೆರವುಗೊಳಿಸಲು ಪೊಲೀಸರು ನೋಟಿಸ್​ ನೀಡಿದ್ದಾರೆ ಎಂದು ನ್ಯೂಸ್ 18 ವರದಿ ಹೇಳಿದೆ. ಬ್ಯಾನರ್ ಹಾಕಲು ಅನುಮತಿ ಪಡೆಯದೇ ಇರುವುದರಿಂದ ಕೊಣಾಜೆ ಪೊಲೀಸ್ ಠಾಣಾಧಿಕಾರಿ ಟಿಪ್ಪು ಪ್ರತಿಮೆ ಮತ್ತು ಬ್ಯಾನರ್ ತೆರವುಗೊಳಿಸಲು ನೋಟಿಸ್​ ನೀಡಿದ್ದಾರೆ ಎಂದು ವರದಿಯಾಗಿದೆ.

ಡಿವೈಎಫ್ಐ ರಾಜ್ಯ‌ ಸಮ್ಮೇಳನದ ಪ್ರಯುಕ್ತ ನಾಡಿನ ಆದರ್ಶ ಪುರುಷರ, ಸ್ವಾತಂತ್ರ್ಯ ಸೇನಾನಿಗಳ, ಸಮಾಜ ಸುಧಾರಕರ ಪ್ರತಿಮೆ ಹಾಗೂ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಅದೇ ರೀತಿ‌ ಹರೇಕಳದಲ್ಲಿ ಕಾರ್ಯಕರ್ತರು ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಿದ್ದಾರೆ. ಹರೇಕಳದ ಡಿವೈಎಫ್ಐ ಕಚೇರಿ ಬಳಿಯಲ್ಲೇ ಕಾರ್ಡ್ ಬೋರ್ಡ್​ನಿಂದ 6 ಅಡಿ ಉದ್ದದ ಟಿಪ್ಪು ಸುಲ್ತಾನ್ ಕಟೌಟ್ ನಿರ್ಮಿಸಲಾಗಿದೆ. ಈ ಕಟೌಟ್ ತೆರವಿಗೆ ಪೊಲೀಸರು ಸೂಚಿಸಿದ್ದಾರೆ.

ಪೊಲೀಸರು ನೋಟಿಸ್​ ನೀಡಿರುವ ಹಿನ್ನೆಲೆ ಪ್ರತಿಕ್ರಿಯಿಸಿದ ಡಿವೈಎಫ್ಐ ದ. ಕ ಜಿಲ್ಲಾ ಸಮಿತಿ ಅಧ್ಯಕ್ಷ ‘ಟಿಪ್ಪು ಸುಲ್ತಾನ್ ಪ್ರತಿಮೆ, ಬ್ಯಾನರ್​ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಸರ್ಕಾರ ನಿಷೇಧ ಹಾಕಿದೆಯಂತೆ. ಟಿಪ್ಪು ಪ್ರತಿಮೆ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಕೋಟಿ ಚೆನ್ನಯರ ಪ್ರತಿಮೆ ಸೇರಿದಂತೆ ಎಲ್ಲಾ ಆದರ್ಶರ, ಮಹಾತ್ಮರ ಪ್ರತಿಮೆ, ಬ್ಯಾನರ್​ಗಳಿಗೆ ಡಿವೈಎಫ್ಐ ಕಾರ್ಯಕರ್ತರು ಕಾವಲು ನಿಂತು ಕಾಯುತ್ತಾರೆ’ ಎಂದು ತಿಳಿಸಿರುವುದಾಗಿ ಮಾಧ್ಯಮ ವರದಿ ಹೇಳಿದೆ.

ಕಟೌಟ್ ಹಾಕುವಾಗ ಪೊಲೀಸ್ ಅನುಮತಿ ಪಡೆಯದೇ ಇರುವುದರಿಂದ ಕಟೌಟ್ ತೆರವು ಮಾಡುವಂತೆ ಕಾರ್ಯಕರ್ತರಿಗೆ ಕೋಣಾಜೆ ಠಾಣಾಧಿಕಾರಿ ಸೂಚಿಸಿದ್ದು, ಇತ್ತ ಟಿಪ್ಪು ಪ್ರತಿಮೆ ಹಾಗೂ ಬ್ಯಾನರ್ ತೆಗೆಯುವುದಿಲ್ಲ ಎಂದು ಡಿವೈಎಫ್‌ಐ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.