ಶೀಂಬ್ರ ಕೃಷ್ಣಾಂಗಾರಕ ಸ್ನಾನಘಟ್ಟಕ್ಕೆ ಶಿಲಾನ್ಯಾಸ: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮಹತ್ವದ ಹೆಜ್ಜೆ; ಸೋದೆ ಶ್ರೀ

ಉಡುಪಿ: ಶ್ರೀ ವಾದಿರಾಜ ಗುರುಸಾರ್ವಭೌಮರು ತಮ್ಮ ‘ತೀರ್ಥಪ್ರಬಂಧ’ ಪ್ರವಾಸಕಥನದಲ್ಲಿ ಉಲ್ಲೇಖಿಸಿದ ಉಡುಪಿಯ ಜೀವನದಿ ಸ್ವರ್ಣೆಯ ತೀರದಲ್ಲಿರುವ ಪುರಾಣ ಪ್ರಸಿದ್ಧ ಕೃಷ್ಣಾಂಗಾರಕ ಸ್ನಾನ ಘಟ್ಟದಲ್ಲಿ ಸುಸಜ್ಜಿತ ಸ್ನಾನಘಟ್ಟಕ್ಕೆ ಚಾಲನೆ ದೊರೆತಿರುವುದು ಉಡುಪಿಯ ಧಾರ್ಮಿಕ ಪ್ರವಾಸೋದ್ಯಮದ ಪ್ರಗತಿಗೆ ಒಂದು ಮಹತ್ವದ ಹೆಜ್ಜೆ ಎಂದು ಸೋದೆ ಮಠಾಧೀಶ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದ್ದಾರೆ.

ಪೆರಂಪಳ್ಳಿ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಸಮೀಪ ಸ್ವರ್ಣಾನದೀ ತೀರದಲ್ಲಿ ನೂತನ ಕೃಷ್ಣಾಂಗಾರಕ ಸ್ನಾನಘಟ್ಟ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿದರು.

ಪವಿತ್ರವಾದ ಈ ಸ್ಥಳಕ್ಕೆ ವರ್ಷಂಪ್ರತಿ ತೀರ್ಥ ಸ್ನಾನಕ್ಕೆ ನಾಡಿನ ಅನೇಕ ಭಾಗಗಳಿಂದ ಸಾವಿರಾರು ಭಾವುಕ ಜನ ಆಗಮಿಸುತ್ತಾರೆ. ಆದರೆ ಇಲ್ಲಿ ಸುಸಜ್ಜಿತ ಸ್ನಾನಘಟ್ಟದ ಕೊರತೆ ಇತ್ತು. ಅನೇಕ ವರ್ಷಗಳ ಪ್ರಯತ್ನದ ಬಳಿಕ ರಾಜ್ಯ ಸರಕಾರವು ಸಣ್ಣ ನೀರಾವರಿ ಇಲಾಖೆಯ ಒಂದು ಕೋಟಿ ರೂ. ಅನುದಾನದ ಮೂಲಕ ಅದರ ಅನುಷ್ಠಾನಕ್ಕೆ ಮುಂದಾಗಿರುವುದು ಉತ್ತಮ ವಿಚಾರವಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಸಣ್ಣ ನೀರಾವರಿ ಮಂತ್ರಿ ಮಾಧುಸ್ವಾಮಿ ಹಾಗೂ ಶಾಸಕ ಕೆ. ರಘುಪತಿ ಭಟ್ ಅಭಿನಂದನೀಯರು ಎಂದ ಶ್ರೀಗಳು, ಈ ಸ್ನಾನಘಟ್ಟ ನಿರ್ಮಾಣಕ್ಕೆ ಕನಸು ಕಂಡ ಡಾ ವಿ ಎಸ್ ಆಚಾರ್ಯರನ್ನು ಸ್ಮರಿಸಿಕೊಂಡರು.

ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಯವರು ಧಾರ್ಮಿಕ ವಿಧಿ ನೆರವೇರಿಸಿದರು. ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಸದಸ್ಯರುಗಳಾದ ಅರುಣಾ ಸುಧಾಮ , ಬಾಲಕೃಷ್ಣ ಶೆಟ್ಟಿ‌, ಗಿರಿಧರ ಆಚಾರ್ಯ, ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಮಾಜಿ ನಗರಸಭಾಧ್ಯಕ್ಷ ಹೆರ್ಗ ದಿನಕರ ಶೆಟ್ಟಿ , ಸಣ್ಣ ನೀರಾವರಿ ಇಲಾಖೆಯ‌ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೇಷಕೃಷ್ಣ , ಜೂನಿಯರ್ ಇಂಜಿನಿಯರ್ ಹರೀಶ್ , ಗುತ್ತಿಗೆದಾರರಾದ ರಾಜೇಶ್ ಕಾರಂತ್ , ಶಿವಪ್ರಸಾದ್ ಹೆಗ್ಡೆ ಆತ್ರಾಡಿ , ಎಸ್ ರತ್ನಕುಮಾರ್, ಇಂಜಿನಿಯರ್ ಭಗವಾನ್ ದಾಸ್ ಕೆ . ಕೃಷ್ಣಮೂರ್ತಿ ಶಿವತ್ತಾಯ ಮಧ್ವೇಶ ತಂತ್ರಿ , ಮಧುಸೂದನ ಶಿವತ್ತಾಯ ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಶಂಕರ್ ಕುಲಾಲ್, ಪ್ರಶಾಂತ್ ಭಟ್ ಸಹಕರಿಸಿದರು .