ಅಗ್ನಿಪಥ್ ಯೋಜನೆ ಎಂದರೇನು? ಅಗ್ನಿವೀರರಾಗಲು ಬೇಕಾಗುವ ಅರ್ಹತೆ ಮತ್ತು ಮಾನದಂಡಗಳೇನು? ಮಾಹಿತಿ ಇಲ್ಲಿದೆ

ಭಾರತೀಯ ಸೇನೆಯ ಮೂರು ಸೇವೆಗಳಲ್ಲಿ ಸೈನಿಕರನ್ನು ನೇಮಿಸಿಕೊಳ್ಳಲು ಸರ್ಕಾರ ಹೊಸ ಅಗ್ನಿಪಥ್ ಯೋಜನೆಯನ್ನು ಮಂಗಳವಾರ ಅನಾವರಣಗೊಳಿಸಿದೆ. ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿಯಿಂದ ಅನುಮತಿ ಪಡೆದಿರುವ ಹೊಸ ರಕ್ಷಣಾ ನೇಮಕಾತಿ ಸುಧಾರಣೆಯು ತಕ್ಷಣವೇ ಜಾರಿಗೆ ಬರಲಿದ್ದು, ಯೋಜನೆಯಡಿಯಲ್ಲಿ ನೇಮಕಗೊಂಡ ಸೈನಿಕರನ್ನು ‘ಅಗ್ನಿವೀರ್’ ಎಂದು ಕರೆಯಲಾಗುತ್ತದೆ. ಹೊಸ ವ್ಯವಸ್ಥೆಯು ಅಧಿಕಾರಿ ಶ್ರೇಣಿಗಿಂತ ಕೆಳಗಿನ ಸಿಬ್ಬಂದಿಗೆ ಮಾತ್ರ.

1. ಹೊಸ ಯೋಜನೆಯಡಿ, ವಾರ್ಷಿಕವಾಗಿ ಸುಮಾರು 45,000 ರಿಂದ 50,000 ಸೈನಿಕರನ್ನು ನೇಮಿಸಿಕೊಳ್ಳಲಾಗುವುದು ಮತ್ತು ಹೆಚ್ಚಿನವರು ಕೇವಲ ನಾಲ್ಕು ವರ್ಷಗಳಲ್ಲಿ ಸೇವೆಯನ್ನು ತೊರೆಯುತ್ತಾರೆ. ಒಟ್ಟು ವಾರ್ಷಿಕ ನೇಮಕಾತಿಗಳಲ್ಲಿ, 25 ಪ್ರತಿಶತ ಸೈನಿಕರಿಗೆ ಮಾತ್ರ ಶಾಶ್ವತ ಆಯೋಗದ ಅಡಿಯಲ್ಲಿ ಇನ್ನೂ 15 ವರ್ಷಗಳವರೆಗೆ ಮುಂದುವರಿಸಲು ಅನುಮತಿಸಲಾಗುತ್ತದೆ.

2. ಅಗ್ನಿಪಥ್ ಯೋಜನೆಯಡಿ, 17.5 ವರ್ಷದಿಂದ 21 ವರ್ಷದೊಳಗಿನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನೇಮಕಾತಿ ಮಾನದಂಡಗಳು ಒಂದೇ ಆಗಿರುತ್ತವೆ ಮತ್ತು ರಾಲಿಗಳ ಮೂಲಕ ವರ್ಷಕ್ಕೆ ಎರಡು ಬಾರಿ ನೇಮಕಾತಿ ಮಾಡಲಾಗುತ್ತದೆ.

3. ಆಯ್ಕೆಯಾದ ನಂತರ, ಆಕಾಂಕ್ಷಿಗಳು ಆರು ತಿಂಗಳ ತರಬೇತಿಯನ್ನು ಪಡೆಯುತ್ತಾರೆ. ಆ ಬಳಿಕ ಮೂರೂವರೆ ವರ್ಷಗಳ ಕಾಲ ಇವರನ್ನು ಸೇನೆಯಲ್ಲಿ ನಿಯೋಜಿಸಲಾಗುತ್ತದೆ. ಈ ಅವಧಿಯಲ್ಲಿ, ಅವರು ಪ್ರತಿ ತಿಂಗಳು ರೂ 30,000 ರ ಆರಂಭಿಕ ವೇತನದ ಜೊತೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ. ನಾಲ್ಕು ವರ್ಷಗಳ ಸೇವೆಯ ಅಂತ್ಯದ ವೇಳೆಗೆ ವೇತನವು ರೂ 40,000 ಕ್ಕೆ ಏರುತ್ತದೆ.

4. ಮುಖ್ಯವಾಗಿ, ಈ ಅವಧಿಯಲ್ಲಿ, ಅವರ ಸಂಬಳದ 30 ಪ್ರತಿಶತವನ್ನು ಸೇವಾ ನಿಧಿ ಕಾರ್ಯಕ್ರಮದ ಅಡಿಯಲ್ಲಿ ಮೀಸಲಿಡಲಾಗುತ್ತದೆ ಮತ್ತು ಸರ್ಕಾರವು ಪ್ರತಿ ತಿಂಗಳು ಸಮಾನ ಮೊತ್ತವನ್ನು ನೀಡುತ್ತದೆ ಮತ್ತು ಅದಕ್ಕೆ ಬಡ್ಡಿ ಕೂಡ ಬರುತ್ತದೆ. ನಾಲ್ಕು ವರ್ಷಗಳ ಅವಧಿಯ ಅಂತ್ಯದಲ್ಲಿ, ಪ್ರತಿಯೊಬ್ಬ ಸೈನಿಕನು ಒಟ್ಟು ಮೊತ್ತವಾಗಿ 11.71 ಲಕ್ಷ ರೂಪಾಯಿಗಳನ್ನು ಪಡೆಯುತ್ತಾನೆ, ಮತ್ತು ಅದು ತೆರಿಗೆ ಮುಕ್ತವಾಗಿರುತ್ತದೆ.

5. ಸೈನಿಕರು ನಾಲ್ಕು ವರ್ಷಗಳವರೆಗೆ ರೂ 48 ಲಕ್ಷ ಜೀವ ವಿಮೆಯನ್ನು ಸಹ ಪಡೆಯುತ್ತಾರೆ. ಮರಣಹೊಂದಿದ ಸಂದರ್ಭದಲ್ಲಿ, ಪಾವತಿಸದ ಅವಧಿಯ ವೇತನವೂ ಸೇರಿದಂತೆ 1 ಕೋಟಿ ರೂ. ಗಳನ್ನು ವಿಮೆಯಾಗಿ ಪಡೆಯುತ್ತಾರೆ.

6. ಆದಾಗ್ಯೂ, ನಾಲ್ಕು ವರ್ಷಗಳ ನಂತರ, ಬ್ಯಾಚ್‌ನ ಕೇವಲ 25 ಪ್ರತಿಶತ ಸೈನಿಕರನ್ನು ಮಾತ್ರ 15 ವರ್ಷಗಳ ಅವಧಿಗೆ ಅವರ ಆಯಾ ಸೇವೆಗಳಿಗೆ ಮರಳಿ ನೇಮಿಸಿಕೊಳ್ಳಲಾಗುತ್ತದೆ. ಮರು-ಆಯ್ಕೆಯಾದವರಿಗೆ, ಆರಂಭದ ನಾಲ್ಕು ವರ್ಷಗಳ ಅವಧಿಯನ್ನು ನಿವೃತ್ತಿ ಪ್ರಯೋಜನಗಳಿಗಾಗಿ ಪರಿಗಣಿಸಲಾಗುವುದಿಲ್ಲ.

7. ಈ ಯೋಜನೆಯಡಿ 90 ದಿನಗಳಲ್ಲಿ ನೇಮಕಾತಿ ಪ್ರಾರಂಭವಾಗುತ್ತದೆ.

8. ಯೋಜನೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಮತ್ತು ನಾಲ್ಕು ವರ್ಷಗಳ ಸೇವೆಯಲ್ಲಿ ಅಳವಡಿಸಿಕೊಂಡ ಕೌಶಲ್ಯ ಮತ್ತು ಅನುಭವದಿಂದಾಗಿ ಅಂತಹ ಸೈನಿಕರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯುತ್ತಾರೆ.

9. ನಾಲ್ಕು ವರ್ಷಗಳ ನಂತರ ಸೇವೆಯನ್ನು ತೊರೆದ ಸೈನಿಕರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಸಹಾಯ ಮಾಡುತ್ತದೆ. ಅವರಿಗೆ ಕೌಶಲ್ಯ ಪ್ರಮಾಣಪತ್ರಗಳು ಮತ್ತು ಬ್ರಿಡ್ಜ್ ಕೋರ್ಸ್‌ಗಳನ್ನು ಒದಗಿಸಲಾಗುತ್ತದೆ. ಉದ್ದಿಮೆದಾರರನ್ನು ಸೃಷ್ಟಿಸಲು ಕೂಡಾ ಇದು ಪ್ರೇರಣೆಯಾಗಲಿದೆ.

Image credit: Mygov.in