ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮ

ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನಲ್ಲಿ 2026-2027ನೇ ಸಾಲಿನ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಣಿಪಾಲದ ಕಾರ್‌ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್‌ನ (KarMic Design Pvt. Ltd.) ಸಿಇಒ ಶ್ರೀ ರತ್ನಾಕರ ಭಟ್ ಅವರು ಭಾಗವಹಿಸಿ ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ತಾಂತ್ರಿಕ ಕೌಶಲ್ಯಗಳ ಜೊತೆಗೆ ಸೃಜನಶೀಲತೆ, ನಿರಂತರ ಕಲಿಕೆ ಮತ್ತು ಶಿಸ್ತು ಬಹಳ ಮುಖ್ಯ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡುವ ಎಂಜಿನಿಯರ್‌ಗಳಾಗಿ ರೂಪುಗೊಳ್ಳಬೇಕು,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಅವರು ಕಾಲೇಜಿನ ಶೈಕ್ಷಣಿಕ ವಾತಾವರಣ, ಮೂಲಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಂಸ್ಥೆ ನೀಡುತ್ತಿರುವ ಪ್ರೋತ್ಸಾಹದ ಕುರಿತು ಪ್ರಾಸ್ತಾವಿಕವಾಗಿ ವಿವರಿಸಿದರು.

ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಅವರು ಮಾತನಾಡುತ್ತಾ, ಕಾಲೇಜು ಜೀವನದಲ್ಲಿ ಸ್ಪಷ್ಟ ಗುರಿ, ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಇದೇ ಸಂದರ್ಭದಲ್ಲಿ ವಿಟಿಯು (VTU) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು (ಯೂನಿವರ್ಸಿಟಿ ಸೆಮಿಸ್ಟರ್ ಟಾಪರ್ಸ್) ಸಂಸ್ಥೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ವಿದ್ಯಾರ್ಥಿ ಕ್ಷೇಮಪಾಲನಾ ಸಂಯೋಜಕರಾದ ಶ್ರೀಮತಿ ಸೂಕ್ಷ್ಮ ಅಡಿಗ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಹಾಗೂ ಪೋಷಕರನ್ನು ಸ್ವಾಗತಿಸಿದರು.

ಬೇಸಿಕ್ ಸೈನ್ಸ್ ಮುಖ್ಯಸ್ಥರಾದ ಶ್ರೀ ದೀಪಕ್ ಶೆಟ್ಟಿ ವಂದಿಸಿದರು. ಪ್ಲೇಸ್ಮೆಂಟ್ ಡೀನ್ ಪ್ರೊ. ಅಕ್ಷತ ನಾಯ್ಕ್ ಅತಿಥಿ ಪರಿಚಯ ಮಾಡಿದರು.

ವಿದ್ಯಾರ್ಥಿನಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು, ಪೋಷಕರು ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.