ಉಡುಪಿ: ಮೂಡನಿಡಂಬೂರು ಗರಡಿ ಸಮೀಪದ ಇಂದ್ರಾಣಿ ನದಿ ದಡದಲ್ಲಿ ಗುರುವಾರ ತಡರಾತ್ರಿ ಸುಮಾರು 45 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.
ನದಿಯ ದಡದಲ್ಲಿ ವ್ಯಕ್ತಿಯೊಬ್ಬರು ಮೀನಿಗೆ ಗಾಳ ಹಾಕುತ್ತಿದ್ದು, ಆತನ ಗಾಳಕ್ಕೆ ಮೀನಿನ ಬದಲು ಶವವು ಸಿಕ್ಕಿ ಕೊಂಡಿದೆ. ಇದರಿಂದ ಭಯಗೊಂಡ ಆತ ಗಾಳಗಾರಿಕೆಯ ಪರಿಕರಗಳನ್ನು ಬಿಟ್ಟು ದಿಕ್ಕಪಾಲಾಗಿ ಓಡಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ನಗರ ಠಾಣಾಧಿಕಾರಿ ಶಕ್ತಿವೇಲು, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಸಿಬ್ಬಂದಿ ಮನೋಹರ್ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನದಿಗಿಳಿದು ಕಾರ್ಯಾಚರಣೆಯ ಮೂಲಕ ಹರಿಯುತ್ತಿರುವ ನದಿಯಿಂದ ಶವವನ್ನು ಮೇಲಕ್ಕೆತ್ತಿದ್ದಾರೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.