ಚಂದ್ರಯಾನ-3ರ ಹಿಂದಿದ್ದಾರೆ ಭಾರತದ ‘ರಾಕೆಟ್ ಮಹಿಳೆ’ ಎಂದು ಖ್ಯಾತಿವೆತ್ತ ರಿತು ಕರಿದಾಲ್ ಶ್ರೀವಾಸ್ತವ

ಶ್ರೀಹರಿಕೋಟಾ: ಭಾರತದ ಮೂರನೇ ಚಂದ್ರಯಾನ ಅಭಿಯಾನ ‘ಚಂದ್ರಯಾನ-3’ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಚಂದ್ರಯಾನ-3 ರ ಹಿಂದಿರುವ ನಾರೀಶಕ್ತಿ ಭಾರತದ ಸ್ವಂತ ‘ರಾಕೆಟ್ ಮಹಿಳೆ’ ಎಂದೇ ಖ್ಯಾತರಾದ ರಿತು ಕರಿದಾಲ್ ಶ್ರೀವಾಸ್ತವ.

ಮಹಿಳಾ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ರಿತು ಕರಿದಾಲ್ ಶ್ರೀವಾಸ್ತವ ಅವರು ಹಿರಿಯ ವಿಜ್ಞಾನಿಯಾಗಿದ್ದು, ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಜನ್ನಿಸಿದ ಇವರು 1996 ರಲ್ಲಿ ಲಕ್ನೋ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಎಂಎಸ್ಸಿ ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ನಿಂದ ಎಂಟೆಕ್ ಮಾಡಿದ್ದಾರೆ. ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಆಕೆಯ ಶಿಕ್ಷಕರು ಮತ್ತು ಮಾರ್ಗದರ್ಶಕರ ಪ್ರಕಾರ ರಿತು ಅತ್ಯಂತ ಬುದ್ದಿವಂತ ವಿದ್ಯಾರ್ಥಿನಿಯಾಗಿದ್ದರು.

ರಿತು ಚಿಕ್ಕ ವಯಸ್ಸಿನಿಂದಲೇ ಬಾಹ್ಯಾಕಾಶವನ್ನು ಅನ್ವೇಷಿಸುವ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇಸ್ರೋ ಅಥವಾ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಬಗ್ಗೆ ಹಾಗೂ ಬಾಹ್ಯಾಕಾಶ ಚಟುವಟಿಕೆಗಳಿಗೆ ಸಂಬಂಧಿಸಿದ ಸುದ್ದಿ ಲೇಖನಗಳನ್ನು ಸಂಗ್ರಹಿಸುವುದು ಶಾಲಾ ದಿನಗಳಲ್ಲಿ ಅವರ ಹವ್ಯಾಸಗಳಲ್ಲಿ ಒಂದಾಗಿತ್ತು.

ಅವರು ನವೆಂಬರ್, 1997 ರಲ್ಲಿ ಇಸ್ರೋ ಅನ್ನು ಸೇರಿದರು. ಇಸ್ರೋದ ಅನೇಕ ಪ್ರತಿಷ್ಠಿತ ಕಾರ್ಯಾಚರಣೆಗಳಿಗಾಗಿ ಕೆಲಸ ಮಾಡಿರುವ ಇವರು ಅನೇಕ ಮಿಷನ್ ಗಳಲ್ಲಿ ನಿರ್ದೇಶಕರ ಜವಾಬ್ದಾರಿಯುತ ಸ್ಥಾನವನ್ನು ಸಹ ನಿರ್ವಹಿಸಿದ್ದಾರೆ.

ಮಿಷನ್ ಮಂಗಲಯಾನದಲ್ಲಿ ಬಾಹ್ಯಾಕಾಶದಲ್ಲಿ ಉಪಗ್ರಹದ ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸುವ ಮತ್ತು ಅಸಮರ್ಪಕ ಕಾರ್ಯಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವ ಕ್ರಾಫ್ಟ್‌ನ ಮುಂದುವರಿಕೆಯ ಸ್ವಾಯತ್ತತೆಯ ವ್ಯವಸ್ಥೆಯನ್ನು ಪರಿಕಲ್ಪನೆ ಮಾಡುವುದು ಮತ್ತು ಕಾರ್ಯಗತಗೊಳಿಸುವುದು ರಿತು ಅವರ ಜವಾಬ್ದಾರಿಯಾಗಿತ್ತು. ಚಂದ್ರಯಾನ 2 ಮಿಷನ್ ನ ನಿರ್ದೇಶಕರಾಗಿ ಮೇಲ್ವಿಚಾರಣೆ ಮಾಡಿದ್ದಾರೆ.

ಶ್ರೀವಾಸ್ತವ ಅವರು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ 20 ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದಾರೆ. ರಿತು ಅವರ ಪತಿ ಅವಿನಾಶ್ ಶ್ರೀವಾಸ್ತವ ಮತ್ತು ಮಕ್ಕಳು ಆದಿತ್ಯ, ಅನಿಶಾ.

2007 ರಲ್ಲಿ ಭಾರತದ ರಾಷ್ಟ್ರಪತಿಗಳಾದ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಇಸ್ರೋ ಯುವ ವಿಜ್ಞಾನಿ ಪ್ರಶಸ್ತಿಯನ್ನು ಪಡೆದಿದ್ದಾರೆ. TED ಮತ್ತು TEDx ಕಾರ್ಯಕ್ರಮಗಳಲ್ಲಿ ಮಾರ್ಸ್ ಆರ್ಬಿಟರ್ ಮಿಷನ್‌ನ ಯಶಸ್ಸನ್ನು ಪ್ರಸ್ತುತಪಡಿಸಿದ್ದಾರೆ. ಲಕ್ನೋ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.