ಉಡುಪಿ: ಉಕ್ರೇನ್ ನಲ್ಲಿ ಭಾರತೀಯರನ್ನು ವಿಪರೀತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಭಾರತೀಯರಿಗೆ ರೈಲುಗಳಿಗೆ ಹತ್ತಲೂ ಕೂಡ ಬಿಡುತ್ತಿಲ್ಲ. ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಉಕ್ರೇನ್ ನ ವಿನ್ನಯ್ಟ್ಸಿಯಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಸದ್ಯ ದೆಹಲಿಗೆ ವಾಪಾಸಾಗಿರುವ ಪರ್ಕಳದ ನಿವಾಸಿ ನಿಯಮ್ ರಾಘವೇಂದ್ರ ಬೇಸರ ಹೊರಹಾಕಿದ್ದಾರೆ.
ಗುರುವಾರ ಮುಂಜಾನೆ 6.30ಕ್ಕೆ ಮುಂಬೈ ತಲುಪಿದ ನಿಯಮ್, ನಂತರ ದೆಹಲಿಯಲ್ಲಿರುವ ಹೆತ್ತವರ ಮಡಿಲಿಗೆ ಸೇರಿದ್ದಾರೆ. ಉಕ್ರೇನ್ ನಲ್ಲಿ ಎಲ್ಲಿಗೆ ಹೋದರೂ ಮೊದಲು ಅಲ್ಲಿಯ ಜನರಿಗೆ ಆದ್ಯತೆ ನೀಡುವುದಲ್ಲದೆ ಭಾರತೀಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಕಾರ್ಖೀವ್, ಕೀವ್ ನಗರಗಳಲ್ಲಿರುವ ಭಾರತೀಯರಿಗೆ ತುಂಬಾನೇ ಕಷ್ಟ ಕೊಟ್ಟಿದ್ದಾರೆ.
ನಾನು 12 ಕಿ.ಮೀ ನಡೆದುಕೊಂಡೆ ಪ್ರಯಾಣ ಮಾಡಿದ್ದು ಇನ್ನು ಕೆಲವರು 30-40 ಕಿಮೀ ನಡೆದುಕೊಂಡು ಬಂದಿದ್ದಾರೆ. ಅಲ್ಲದೆ ಉಕ್ರೇನ್ ನಲ್ಲಿ ತಿನ್ನಲು ಆಹಾರ ಕೂಡ ಸಮಸ್ಯೆ ಆಗಿದ್ದು ರೋಮಾನಿಯಕ್ಕೆ ಬಂದ ಮೇಲೆ ನಮಗೆ ಆಹಾರ ಮತ್ತು ನೀರು ಸಿಕ್ಕಿತು ಎಂದು ಉಕ್ರೇನ್ ನಲ್ಲಿ ಅನುಭವಿಸಿದ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.