ಲಂಡನ್: ರಸ್ತೆಬದಿಯಲ್ಲಿ ಪ್ರವಾಸಿಗರ ಫೋಟೋಗಳನ್ನು ಕ್ಲಿಕ್ಕಿಸಿ ಮಾರಾಟ ಮಾಡುವ ಮೂಲಕ ಹಣ ಗಳಿಸಲು ಮಲಯಾಳಿ ಯುವಕನೊಬ್ಬ ನಡೆಸಿದ ವಿಶಿಷ್ಟ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಷ್ಣು ವಿಜಯಾಧರನ್ ಎಂಬ ಯುವಕ ಸೆಂಟ್ರಲ್ ಲಂಡನ್‌ನಲ್ಲಿ ಪ್ರವಾಸಿಗರ ಹಾಗೂ ಸ್ಥಳೀಯರ ಫೋಟೋಗಳನ್ನು ತೆಗೆದು ಪ್ರತಿ ಫೋಟೋಗೆ 5 ಪೌಂಡ್ (ಸುಮಾರು ₹540) ದರ ನಿಗದಿಪಡಿಸಿ ಮಾರಾಟ ಮಾಡಲು ಮುಂದಾಗಿದ್ದರು. ಈ ಪ್ರಯೋಗದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಲ್ಪ ಸಮಯದಲ್ಲಿ ಎಷ್ಟು ಹಣ ಗಳಿಸಬಹುದು ಎಂಬ ಸವಾಲನ್ನೂ ಮುಂದಿಟ್ಟಿದ್ದರು.
ಈ ಪ್ರಯತ್ನಕ್ಕಾಗಿ ವಿಷ್ಣು ವಿಶೇಷ ಕೊಡಾಕ್ ಕ್ಯಾಮೆರಾವನ್ನು ಖರೀದಿಸಿದ್ದರು. ಆರಂಭದಲ್ಲಿ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ದೊರೆತು, ಕೇವಲ 10 ನಿಮಿಷಗಳಲ್ಲಿ 11 ಪೌಂಡ್ (ಸುಮಾರು ₹1,200) ಗಳಿಸಲು ಯಶಸ್ವಿಯಾದರು.
ಆದರೆ ನಂತರ ಸ್ಥಳಕ್ಕೆ ಬಂದ ಲಂಡನ್ ಪೊಲೀಸರು ಹಾಗೂ ಸಿಟಿ ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳು ಅವರ ವ್ಯಾಪಾರವನ್ನು ತಡೆದರು. ರಸ್ತೆಬದಿಯಲ್ಲಿ ವ್ಯಾಪಾರ ನಡೆಸಲು ಅಗತ್ಯವಿರುವ ಮುನ್ಸಿಪಾಲಿಟಿ ಪರವಾನಗಿ ಇಲ್ಲದ ಕಾರಣ ವಿಷ್ಣು ಅವರಿಗೆ ದಂಡ ವಿಧಿಸಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಷ್ಣು, ಇಂತಹ ಚಟುವಟಿಕೆಗೆ ವಿಶೇಷ ಅನುಮತಿ ಅಗತ್ಯವಿರುವುದು ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಸರಿಯಾದ ಪರವಾನಗಿ ಪಡೆದರೆ ಈ ಕೆಲಸದಿಂದ ಒಂದು ಗಂಟೆಗೆ ಸುಮಾರು 100 ಪೌಂಡ್ (ಸುಮಾರು ₹10,000) ವರೆಗೆ ಆದಾಯ ಗಳಿಸುವ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾವಿರಾರು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ವೀಡಿಯೋ ಲಿಂಕ್ ಇಲ್ಲಿದೆ https://www.instagram.com/reel/DYz4g0_sbVb/?igsh=MWhra2V4MHI5bDA4cg==

















