ವಾಟ್ಸಾಪ್ ನಲ್ಲಿ ಅಜ್ಞಾತ ಅಂತಾರಾಷ್ಟ್ರೀಯ ಕರೆಗಳನ್ನು ಸ್ವೀಕರಿಸುವ ಮುನ್ನ ಜಾಗರೂಕರಾಗಿರಿ

ನವದೆಹಲಿ: ಬೆಳಗ್ಗಿನ ಜಾವದಿಂದ ರಾತ್ರಿವರೆಗೆ ಅಂಗೈಯಲ್ಲೇ ನಲಿದಾದುವ ವಾಟ್ಸಾಪ್ ಬಗ್ಗೆ ಹೊಸ ಹಗರಣವೊಂದು ವರದಿಯಾಗಿದೆ. ಇತ್ತೀಚೆಗೆ ಅಚಾನಕ್ ಆಗಿ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದು, ಈ ಕರೆಗಳು ಇಥಿಯೋಪಿಯಾ (+251), ಮಲೇಷ್ಯಾ (+60), ಇಂಡೋನೇಷ್ಯಾ (+62), ಕೀನ್ಯಾ (+254), ವಿಯೆಟ್ನಾಂ (+84) ಮತ್ತು ಇತರ ದೇಶಗಳಿಂದ ಬರುತ್ತಿವೆ. ಆದಾಗ್ಯೂ, ಈ ಕರೆಗಳು ಬೇರೆ ದೇಶದ ಕೋಡ್‌ನಿಂದ ಪ್ರಾರಂಭವಾಗುವುದರಿಂದ ಕರೆಯ ಮೂಲವು ವಾಸ್ತವವಾಗಿ ಆ ದೇಶವೇ ಆಗಿದೆ ಎಂದು ಅರ್ಥವಲ್ಲ.

ವಾಟ್ಸಾಪ್ ಕರೆಗಳು ಇಂಟರ್ನೆಟ್ ಮೂಲಕ ರವಾನೆಯಾಗುತ್ತವೆ. ಮಾಧ್ಯಮ ವರದಿಗಳ ಪ್ರಕಾರ, ನಾವು ವಾಸವಿರುವ ಸ್ಥಳದಲ್ಲಿರುವ ಯಾರು ಬೇಕಾದರೂ ವಾಟ್ಸಾಪ್ ಸಂಖ್ಯೆಗಳನ್ನು ಯಾರಿಗೆ ಬೇಕಾದರೂ ಮಾರಬಹುದು. ಇಂತಹ ಕೆಲಸಕ್ಕಾಗಿಯೇ ಕೆಲವು ಏಜೆನ್ಸಿಗಳು ಹುಟ್ಟಿಕೊಂಡು ಕಾರ್ಯ ನಿರ್ವಹಿಸುತ್ತಿವೆ. ಅಂತರರಾಷ್ಟ್ರೀಯ ಕರೆ ಶುಲ್ಕಗಳ ಬಗ್ಗೆ ಚಿಂತೆ ಇಲ್ಲದೆ ಯಾರೂ ಕೂಡಾ ಅಂತಹ ಸಂಖ್ಯೆಗಳಿಂದ ಕರೆ ಮಾಡಬಹುದು. ಈ ಕರೆಗಳ ಹಿಂದಿನ ಉದ್ದೇಶ ಸ್ವಾರ್ಥ ಮತ್ತು ಸೈಬರ್ ಅಪರಾಧಗಳಾಗಿರಬಹುದು.

ಆದುದರಿಂದ ಇಂತಹ ಯಾವುದೇ ಅಜ್ಞಾತ ಅಂತರರಾಷ್ಟ್ರೀಯ ಕರೆಗಳಿಗೆ ಪ್ರತಿಕ್ರಿಯಿಸದಿರುವುದು ಉತ್ತಮ. ಈ ಕರೆಗಳು ಏಕಾಏಕಿಯಾಗಿ ಬರುತ್ತವೆ. ಆದ್ದರಿಂದ, ನೀವು ಹಠಾತ್ ಅಂತರಾಷ್ಟ್ರೀಯ ಸಂಖ್ಯೆಯಿಂದ ಕರೆಯನ್ನು ಪಡೆದರೆ, ಹೆಚ್ಚುವರಿ ಸುರಕ್ಷತೆಗಾಗಿ ಅದನ್ನು ತಿರಸ್ಕರಿಸುವುದು ಮತ್ತು ಸಂಖ್ಯೆಯನ್ನು ನಿರ್ಬಂಧಿಸುವುದು ಒಳಿತು. ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆಯಲು ಪ್ರಯತ್ನಿಸುವುದರಿಂದ ಹಿಡಿದು ನಿಮ್ಮ ಹಣವನ್ನು ಕದಿಯುವವರೆಗೆ, ಈ ಸ್ಕ್ಯಾಮರ್‌ಗಳು ಅನೇಕ ದುರುದ್ದೇಶಪೂರಿತ ಉದ್ದೇಶಗಳನ್ನು ಹೊಂದಿರಬಹುದು.

ವಾಟ್ಸಾಪ್ ಸಂದೇಶಗಳ ಮೂಲಕ ಉದ್ಯೋಗದ ಆಮಿಷಗಳನ್ನು ನೀಡುವ ವಂಚನೆಯ ಇನ್ನೊಂದು ವಿಧ ವರದಿಯಾಗುತ್ತಿದೆ. ಸ್ಕ್ಯಾಮರ್‌ಗಳು ಪ್ರತಿಷ್ಠಿತ ಕಂಪನಿಯ ಪ್ರತಿನಿಧಿಗಳಂತೆ ಪೋಸ್ ನೀಡುತ್ತಾರೆ ಮತ್ತು ಮನೆಯಿಂದ ಮಾಡುವ ಅರೆಕಾಲಿಕ ಕೆಲಸದ ಆಮಿಷ ನೀಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಸ್ಕ್ಯಾಮರ್‌ಗಳು ಮೊದಲು ‘ಕಾರ್ಯ’ವನ್ನು ಪೂರ್ಣಗೊಳಿಸಿದ್ದಕ್ಕಾಗಿ ಸಣ್ಣ ಬಹುಮಾನವನ್ನು ನೀಡುವ ಮೂಲಕ ಜನರನ್ನು ಆಕರ್ಷಿಸುತ್ತಾರೆ. ಬಳಕೆದಾರರು ತಮ್ಮ ಹಣವನ್ನು ಪಡೆದ ನಂತರ, ಅವರು ಸ್ಕ್ಯಾಮರ್‌ಗಳನ್ನು ನಂಬಲು ಪ್ರಾರಂಭಿಸುತ್ತಾರೆ ಮತ್ತು ಹೆಚ್ಚು-ದೊಡ್ಡ ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಹಾಗೂ ಹಣ ಕಳೆದುಕೊಳ್ಳುತ್ತಾರೆ.

ಇಂತಹ ಸಂದರ್ಭಗಳಲ್ಲಿ ಅತ್ಯಂತ ಜಾಗರೂಕರಾಗಿರಬೇಕು ಮತ್ತು ಯಾವುದೇ ಕಾರಣಕ್ಕೂ ಇಂತಹ ಕರೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು. ಇಂತಹ ಕರೆ ಅಥವಾ ಸಂದೇಶಗಳನ್ನು ಕಳುಹಿಸುವ ಸಂಖೆಯ್ಗಳನ್ನು ಬ್ಲಾಕ್ ಮಾಡಿ ಸುರಕ್ಷಿತರಾಗಿರಬೇಕು.