Indian Railway: ಬೆಂಗಳೂರಿನಿಂದ ಕಾರವಾರ ಮಾರ್ಗವಾಗಿ ಗೋವಾಕ್ಕೆ ವಂದೇ ಭಾರತ್ ಪ್ರಯಾಣ; ನವೆಂಬರ್‌ ಅಲ್ಲಿ ಚಾಲನೆ

ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಯಶವಂತಪುರದವರೆಗೆ ವಿಸ್ತರಿಸಲಾಗಿದೆ. ನವೆಂಬರ್ ಮೂರನೇ ವಾರದಲ್ಲಿ ಮಂಗಳೂರಿಗೆ ಭೇಟಿ ನೀಡಿ ರೈಲಿಗೆ ಚಾಲನೆ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಭರವಸೆ ನೀಡಿದ್ದಾರೆ. ಕೊಂಕಣ ರೈಲ್ವೆ ವಿಲೀನದ ಬೇಡಿಕೆಯೂ ಸಭೆಯಲ್ಲಿ ಚರ್ಚೆಯಾಗಿದೆ.

ಮಂಗಳೂರು: ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದನೆ ದೊರೆತಿದೆ. ಮಂಗಳೂರು–ಮಡಗಾಂವ್ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಶವಂತಪುರದವರೆಗೆ ವಿಸ್ತರಿಸಲಾಗಿದ್ದು, ನವೆಂಬರ್ ಮೂರನೇ ವಾರದೊಳಗೆ ನೂತನ ಸೇವೆಗೆ ಚಾಲನೆ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ. ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.

ಯಾರಿಗೆಲ್ಲಾ ಅನುಕೂಲ?

ಈ ವಿಸ್ತರಣೆಯಿಂದ ಬೆಂಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಮೂಲಕ ಗೋವಾದ ಮಡಗಾಂವ್‌ಗೆ ನೇರ ವಂದೇ ಭಾರತ್ ರೈಲು ಸಂಪರ್ಕ ದೊರೆಯಲಿದೆ. ರೈಲ್ವೆ ಸಚಿವರು ಮಂಗಳೂರಿಗೆ ಭೇಟಿ ನೀಡಿ ವಿಸ್ತರಿತ ರೈಲು ಸೇವೆಗೆ ಚಾಲನೆ ನೀಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.