ಇಂಡಿಯನ್ ಆಯಿಲ್ ನಿಂದ ‘ಸೂರ್ಯ ನೂತನ್’ ಒಳಾಂಗಣ ಸೌರ ಅಡುಗೆ ವ್ಯವಸ್ಥೆ ಅಭಿವೃದ್ದಿ

ನವದೆಹಲಿ: ಇಂಡಿಯನ್ ಆಯಿಲ್ ಕಂಪನಿಯು ಹೊಸದಾದ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ಇದಕ್ಕೆ ‘ಸೂರ್ಯ ನೂತನ್’ ಎಂದು ಹೆಸರಿಸಿದೆ. ಇದು ಸೂರ್ಯನಿಂದ ಶಕ್ತಿಯನ್ನು ಸಂಗ್ರಹಿಸಿ, ವಿಶೇಷವಾಗಿ ವಿನ್ಯಾಸಗೊಳಿಸಿದ ಬಿಸಿ ಮಾಡುವ ಘಟಕದ ಮೂಲಕ ಸೂರ್ಯನ ಶಕ್ತಿಯನ್ನು ಶಾಖವಾಗಿ ಪರಿವರ್ತಿಸುತ್ತದೆ.

ಈ ಸೂರ್ಯ ನೂತನ್ ಉತ್ಪನ್ನವನ್ನು ಪುನರ್ಭರ್ತಿ(ರೀಚಾರ್ಜ್) ಮಾಡಬಹುದು ಮತ್ತು ನಾಲ್ಕು ವ್ಯಕ್ತಿಗಳಿಗೆ ಆಹಾರ ತಯಾರಿಸಲು ಇದು ಸೂಕ್ತವಾಗಿದೆ.

ಶುಕ್ರವಾರ ನವದೆಹಲಿಯಲ್ಲಿ ಸೂರ್ಯ ನೂತನ್ ಸಿಸ್ಟಂನ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಇದೊಂದು ಕ್ರಾಂತಿಕಾರಿ ಹೆಜ್ಜೆ. ದೇಶದ 60 ಸ್ಥಳಗಳಲ್ಲಿ ಈ ಉತ್ಪನ್ನದ ಪರೀಕ್ಷಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ನಾವು ಪ್ರಸ್ತುತ 50% ಎಲ್ ಪಿ ಜಿ ಅವಶ್ಯಕತೆಗಳನ್ನು ಆಮದು ಮಾಡಿಕೊಳ್ಳುವುದರಿಂದ ಸೂರ್ಯ ನೂತನ್ ನಮ್ಮ ಶಕ್ತಿ ಭದ್ರತೆಯ ಪರಿಸ್ಥಿತಿಯನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಇಂಗಾಲದ ಹೊರಸೂಸುವಿಕೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಮತ್ತು ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಇಂಧನ ಬೆಲೆಗಳಿಂದ ನಾಗರಿಕರನ್ನು ರಕ್ಷಿಸಲಿದೆ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಉಪಸ್ಥಿತರಿದ್ದರು.

ಚಿತ್ರ ಕೃಪೆ: ಟ್ವಿಟರ್