ಭಾರತದ ಪ್ರಯತ್ನಕ್ಕೆ ಸಂದ ಜಯ: ಬೇಹುಗಾರಿಕೆ ಆರೋಪದ ಮೇಲೆ ಬಂಧಿಯಾಗಿದ್ದ ನೌಕಾಪಡೆ ಅಧಿಕಾರಿಗಳನ್ನು ಬಿಡುಗಡೆಗೊಳಿಸಿದ ಕತಾರ್

ಹೊಸದಿಲ್ಲಿ: ಆಪಾದಿತ ಬೇಹುಗಾರಿಕೆ ಪ್ರಕರಣದಲ್ಲಿ ಒಂದು ವರ್ಷದ ಬಳಿಕ ಕತಾರ್‌ನಿಂದ (Qatar) ಬಿಡುಗಡೆಗೊಂಡ ನೌಕಾಪಡೆಯ ಯೋಧರು (Indian Navy) ತಮ್ಮನ್ನು ಬಿಡುಗಡೆಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸರಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ದೇಶಕ್ಕೆ ಮರಳಿದ ಎಂಟು ಯೋಧರಲ್ಲಿ ಏಳು ಮಂದಿ ದೆಹಲಿ ವಿಮಾನ ನಿಲ್ದಾಣದಿಂದ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತಾ ಹೊರನಡೆದಿದ್ದಾರೆ.

ಕತಾರ್‌ನಿಂದ ಹಿಂದಿರುಗಿದ ನೌಕಾಪಡೆಯ ಯೋಧರಲ್ಲೊಬ್ಬರು, “ಪ್ರಧಾನಿ ಮೋದಿಯವರ ಹಸ್ತಕ್ಷೇಪವಿಲ್ಲದೆ ನಾವು ಇಲ್ಲಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಭಾರತ ಸರ್ಕಾರದ ನಿರಂತರ ಪ್ರಯತ್ನದಿಂದ ಇದು ಸಂಭವಿಸಿತು ಎಂದಿದ್ದಾರೆ.”

“ನಾವು ಭಾರತಕ್ಕೆ ಹಿಂತಿರುಗಲು ಸುಮಾರು 18 ತಿಂಗಳುಗಳ ಕಾಲ ಕಾಯುತ್ತಿದ್ದೆವು. ನಾವು ಪ್ರಧಾನಿಗೆ ಅತ್ಯಂತ ಕೃತಜ್ಞರಾಗಿರುತ್ತೇವೆ. ಅವರ ವೈಯಕ್ತಿಕ ಹಸ್ತಕ್ಷೇಪ ಮತ್ತು ಕತಾರ್‌ನೊಂದಿಗಿನ ಅವರ ಸಮೀಕರಣವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಮಾಡಿದ ಪ್ರತಿಯೊಂದು ಪ್ರಯತ್ನಕ್ಕಾಗಿ ನಾವು ಹೃದಯದಿಂದ ಭಾರತ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ ಸರ್ಕಾರದ ಪ್ರಯತ್ನಗಳಿಲ್ಲದೆ ಈ ದಿನವು ಸಾಧ್ಯ ವಾಗುತ್ತಿರಲಿಲ್ಲ” ಎಂದು ಅವರು ಹೇಳಿದ್ದಾರೆ.

ಕತಾರ್‌ನಲ್ಲಿ ಬಂಧಿತರಾಗಿರುವ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಅವರಲ್ಲಿ ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಯೋಧರು ತಾಯ್ನಾಡಿಗೆ ಮರಳಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಕತಾರ್‌ನ ಅಮೀರ್‌ಗೆ ಧನ್ಯವಾದಗಳನ್ನು ಅರ್ಪಿಸುವ ಮೂಲಕ ಭಾರತ ಸರ್ಕಾರ ಇಂದು ಬೆಳಿಗ್ಗೆ ಅವರ ಬಿಡುಗಡೆಯನ್ನು ಘೋಷಿಸಿದೆ.

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ನಾವಿಕ ರಾಗೇಶ್ ಅವರನ್ನು ಆಗಸ್ಟ್ 2022 ರಲ್ಲಿ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಿ ಮರಣದಂಡನೆಗೆ ಗುರಿಯಾಗಿಸಿತ್ತು. ಕೆಲವು ತಿಂಗಳ ಹಿಂದೆ ಭಾರತ ಸರ್ಕಾರ ಯೋಧರ ಮರಣೆ ದಂಡನೆಯನ್ನು ತಡೆಹಿಡಿಯುವ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡ ಬಳಿಕ ಮರಣದಂಡನೆಯನ್ನು ತಡೆಹಿಡಿಯಲಾಗಿತ್ತು.