ಜೋರ್ಹತ್‌ನಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನ: ಐವರು ಯೋಧರು ಹುತಾತ್ಮ, ಸಹ ಪೈಲಟ್ ಪಾರು

43 ಸ್ಕ್ವಾಡ್ರನ್‌ಗೆ ಸೇರಿದ AN-32 ವಿಮಾನವು ವಾಯುಪಡೆ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಪತನಗೊಂಡಿದೆ. ಅಪಘಾತದ ತೀವ್ರತೆಗೆ ವಿಮಾನವು ಎರಡು ತುಂಡುಗಳಾಗಿ ಮುರಿದು ಬೆಂಕಿಗಾಹುತಿಯಾಗಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದುರಂತದಲ್ಲಿ ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಶುಭಂ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ ಖೇಮರಾಮ್ ಕುಮಾವತ್ ಹಾಗೂ ಅಗ್ನಿವೀರ್ ಡ್ಯಾನಿಶ್ ಆಲಂ ಹುತಾತ್ಮರಾಗಿದ್ದಾರೆ. ಕರ್ತವ್ಯದ ವೇಳೆ ಅವರು ಸಲ್ಲಿಸಿದ ಅತ್ಯುನ್ನತ ತ್ಯಾಗವನ್ನು ಭಾರತೀಯ ವಾಯುಪಡೆ ಸ್ಮರಿಸಿದ್ದು, ಮೃತರ ಕುಟುಂಬಗಳೊಂದಿಗೆ ನಿಲ್ಲುವುದಾಗಿ ತಿಳಿಸಿದೆ.

ಘಟನೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, “ಜೋರ್ಹತ್‌ನಲ್ಲಿ ಸಂಭವಿಸಿದ AN-32 ವಿಮಾನ ಅಪಘಾತದಲ್ಲಿ ಐವರು ವಾಯುಯೋಧರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಈ ಸಂಕಷ್ಟದ ಸಮಯದಲ್ಲಿ ರಾಷ್ಟ್ರವು ಅವರ ಕುಟುಂಬಗಳೊಂದಿಗೆ ನಿಲ್ಲಲಿದೆ” ಎಂದು ಹೇಳಿದ್ದಾರೆ.

ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಭಾರತೀಯ ವಾಯುಪಡೆ ತನಿಖಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.