ಅಹಮದಾಬಾದ್: ಇಲ್ಲಿನ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೆಸ್ಟ್ ಕ್ರಿಕೆಟ್ ರ‍್ಯಾಂಕ್‌ನಲ್ಲಿ ಮೊದಲ ಸ್ಥಾನಕ್ಕೇರಿದೆ.
ಅಕ್ಷರ್ ಪಟೇಲ್, ಆರ್.ಅಶ್ವಿನ್ ಮ್ಯಾಜಿಕಲ್ ಸ್ಪೆಲ್ಗೆ ಪೆವಿಲಿಯನ್ ಪರೇಡ್ ನಡೆಸಿದ ಇಂಗ್ಲೆಂಡ್, ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತು.
99 ರನ್ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ, ಆರಂಭದಲ್ಲೇ ಅಜಿಂಕ್ಯಾ ರಹಾನೆ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಹೋರಾಟ 66 ರನ್ಗಳಿಗೆ ಅಂತ್ಯ ಕಂಡರೆ, ರಿಶಭ್ ಪಂತ್ 1 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ಅಶ್ವಿನ್ ಕ್ರೀಸ್ನಲ್ಲಿ ಸೆಟಲ್ ಆಗುವ ಮುನ್ನವೇ 17 ರನ್ಗಳಿಸಿ, ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
ಅಂತಿಮವಾಗಿ ಟೀಮ್ ಇಂಡಿಯಾ 53.2 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು, 145 ರನ್ಗಳಿಸಿತು. ಆ ಮೂಲಕ ಕೊಹ್ಲಿ ಪಡೆ ಇಂಗ್ಲೆಂಡ್ ವಿರುದ್ಧ 33 ರನ್ಗಳ ಅಲ್ಪ ಮುನ್ನಡೆ ಸಾಧಿಸಿತು. ಜೋ ರೂಟ್ 5 ವಿಕೆಟ್ ಪಡೆದರೆ, ಜ್ಯಾಕ್ ಲೀಚ್ 4 ವಿಕೆಟ್ ಪಡೆದು ಮಿಂಚಿದರು.
33 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಟೀಮ್ ಇಂಡಿಯಾ ಸ್ಪಿನ್ನರ್ಗಳ ದಾಳಿಗೆ ತತ್ತರಿಸಿತು. ಇಂಗ್ಲೆಂಡ್ ಕೇವಲ 81 ರನ್ಗಳಿಗೆ ಸರ್ವ ಪತನ ಕಂಡಿತು. ಅಕ್ಷರ್ ಪಟೇಲ್ 5, ಅಶ್ವಿನ್ 4 ಮತ್ತು ವಾಶಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
49 ರನ್ಗಳ ಸುಲಭದ ಗುರಿಯನ್ನ ಬೆನ್ನಟ್ಟಿದ್ದ ಟೀಮ್ ಇಂಡಿಯಾ, ಕೇವಲ 7.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವಿನ ನಗೆ ಬೀರಿತು. ರೋಹಿತ್ ಶರ್ಮಾ ಅಜೇಯ 25 ರನ್ ಮತ್ತು ಶುಭ್ಮನ್ ಗಿಲ್ 15 ರನ್ ಗಳಿಸಿದರು. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.