ಬೆಂಗಳೂರು: ದೇಶದ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸುವವರನ್ನು ಹಿಮ್ಮೆಟ್ಟಿಸುವಲ್ಲಿ ಭಾರತವು ಅಮೇರಿಕಾ ಮತ್ತು ಇಸ್ರೇಲ್ನಂತಹ ದೇಶಗಳ ಸಾಲಿನಲ್ಲಿ ಸೇರಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪ್ರತಿಪಾದಿಸಿದ್ದಾರೆ.
ಯಾರಾದರೂ ತಮ್ಮ ಗಡಿ ಮತ್ತು ಮಿಲಿಟರಿಯ ತಂಟೆಗೆ ಬಂದಾಗ ಕೇವಲ ಎರಡು ರಾಷ್ಟ್ರಗಳು ಸಂಯುಕ್ತ ಅಮೇರಿಕಾ ಮತ್ತು ಇಸ್ರೇಲ್ ಗಳು ಮಾತ್ರ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ, ನಮ್ಮ ಮಹಾನ್ ರಾಷ್ಟ್ರ ಭಾರತವು ಕೂಡಾ ಆ ಗುಂಪಿಗೆ ಸೇರಿದೆ ಎಂದು ನೃಪತುಂಗ ವಿಶ್ವವಿದ್ಯಾನಿಲಯ, ಅದರ ಶೈಕ್ಷಣಿಕ ಬ್ಲಾಕ್ ಮತ್ತು ಇತರ ಹಲವಾರು ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳನ್ನು ಉದ್ಘಾಟಿಸುತ್ತಾ ಷಾ ಹೇಳಿದರು.
ಹಿಂದೆಲ್ಲಾ ಭಯೋತ್ಪಾದಕ ದಾಳಿಗಳಾದಾಗ ಕೇವಲ ಬಾಯಿ ಮಾತಿನಲ್ಲಿ ಖಂಡಿಸಲಾಗುತ್ತಿತ್ತು. ಆದರೆ ಮೋದಿ ಬಂದ ಮೇಲೆ ವಸ್ತು ಸ್ಥಿತಿ ಬದಲಾಗಿದೆ. 2016 ರಲ್ಲಿ ಉರಿ ಮತ್ತು 2019 ರಲ್ಲಿ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿಗಳಾದಾಗ, 10 ದಿನಗಳೊಳಗೆ ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ನಡೆಸಿರುವುದನ್ನು ಅವರು ಪ್ರಸ್ತಾಪಿಸಿದರು.
“ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿ ಹೇಗೆ ಪರಿಣಾಮ ಬೀರಿತು ಎಂದು ಕೆಲವರು ಪ್ರಶ್ನಿಸುತ್ತಾರೆ. ನಾನು ಅವರಿಗೆ (ಪ್ರತಿದಾಳಿ) ಭಾರಿ ಪರಿಣಾಮ ಬೀರುತ್ತದೆ ಎಂದು ಹೇಳುತ್ತೇನೆ. ಭಾರತದ ಗಡಿಯೊಳಗೆ ಯಾರೂ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಈಗ ಇಡೀ ಜಗತ್ತಿಗೆ ತಿಳಿದಿದೆ, ಪ್ರವೇಶಿಸಿದರೆ ತಕ್ಕ ಉತ್ತರವನ್ನು ನೀಡಲಾಗುವುದು” ಎಂದರು.