ಶ್ರೀಲಂಕಾಕ್ಕೆ ದ್ವಿಪಕ್ಷೀಯ ಸಾಲ ನೀಡುವಿಕೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ಭಾರತವು ಚೀನಾವನ್ನು ಹಿಂದಿಕ್ಕಿ ಶ್ರೀಲಂಕಾಕ್ಕೆ ಅತಿದೊಡ್ಡ ದ್ವಿಪಕ್ಷೀಯ ಸಾಲ ನೀಡುವ ದೇಶವಾಗಿ ಹೊರಹೊಮ್ಮಿದೆ. 2022 ರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಭಾರತವು ದ್ವೀಪ ರಾಷ್ಟ್ರಕ್ಕೆ ಒಟ್ಟು 968 ಮಿಲಿಯನ್ ಯುಎಸ್ ಡಾಲರ್ ಸಾಲವನ್ನು ನೀಡಿದೆ. 2017 ರಿಂದ 2021 ರವರೆಗೆ ಕಳೆದ ಐದು ವರ್ಷಗಳಲ್ಲಿ, ಚೀನಾ ಅತಿದೊಡ್ಡ ದ್ವಿಪಕ್ಷೀಯ ಸಾಲದಾತನಾಗಿತ್ತು.

ಭಾರತವು ಶ್ರೀಲಂಕಾಕ್ಕೆ ಸುಮಾರು 4 ಬಿಲಿಯನ್ ಡಾಲರ್ ಆಹಾರ ಮತ್ತು ಆರ್ಥಿಕ ನೆರವು ನೀಡಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.

ಆಗಸ್ಟ್ 22 ರಂದು ಭಾರತವು 21,000 ಟನ್ ರಸಗೊಬ್ಬರವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಿತ್ತು. ಭಾರತವು ಶ್ರೀಲಂಕಾಕ್ಕೆ ಅದರ ಅವಶ್ಯಕತೆಗಳಿಗೆ ಅನುಗುಣವಾಗಿ ಆರ್ಥಿಕ ಸಹಾಯವನ್ನು ವಿಸ್ತರಿಸುವಲ್ಲಿ ಮುಂಚೂಣಿಯಲ್ಲಿದೆ ಮತ್ತು ಅಗತ್ಯವಿರುವ ಸಮಯದಲ್ಲಿ ಗರಿಷ್ಠ ಪ್ರಮಾಣದ ಸಹಾಯವನ್ನು ಒದಗಿಸಿದ ದೇಶಗಳಲ್ಲಿ ಒಂದಾಗಿದೆ. 2022 ರ ಆರಂಭದಿಂದಲೂ, ಶ್ರೀಲಂಕಾವು ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ ಮತ್ತು ಅಲ್ಲಿನ ಸರ್ಕಾರವು ತನ್ನ ವಿದೇಶಿ ಸಾಲಗಳನ್ನು ಬಾಕಿಯಿರಿಸಿಕೊಂಡಿದೆ. ಶ್ರೀಲಂಕಾವು ಆಹಾರ ಮತ್ತು ಇಂಧನ ಕೊರತೆಯೊಂದಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಹೋರಾಡುತ್ತಿದ್ದು, ದ್ವೀಪ ರಾಷ್ಟ್ರದ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಇದು ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ಭಾರತವು ಸಮಯೋಚಿತ ಸಹಾಯವನ್ನು ತನ್ನ ನೆರೆಯ ರಾಷ್ಟ್ರ ಶ್ರೀಲಂಕಾಗೆ ನೀಡಿದೆ.