ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮ ನಿರ್ಭರ ಭಾರತ’ ಕರೆಯಿಂದ ಪ್ರೇರಣೆಗೊಂಡು ಮತ್ತು ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಬಂದೂಕು, ರೇಡಾರ್, ಲಘು ಯುದ್ಧ ಹೆಲಿಕಾಪ್ಟರ್ಗಳು ಸೇರಿದಂತೆ 101 ರಕ್ಷಣಾ ಉಪಕರಣಗಳ ಆಮದಿನ ಮೇಲೆ ನಿರ್ಬಂಧ ಹೇರಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಅವರು ಇಂದು ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ರಕ್ಷಣಾ ಉಪಕರಣಗಳ ದೇಶೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಹಾಗೂ ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಈ ಕ್ರಮ ಪೂರಕವಾಗಲಿದೆ. ಆಮದು ನಿರ್ಬಂಧಿಸುವ ಸಲುವಾಗಿ 101 ರಕ್ಷಣಾ ಉಪಕರಣಗಳ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಸಿದ್ಧಪಡಿಸಿದ್ದು, ಇವುಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆ, ಫಿರಂಗಿಗಳು, ಬಂದೂಕುಗಳು, ಸರಕುಸಾಗಣೆ ವಿಮಾನ, ಲಘು ಹೆಲಿಕಾಪ್ಟರ್ಗಳೂ ಸೇರಿವೆ ಎಂದು ಅವರು ಹೇಳಿದ್ದಾರೆ.
ಆಮದು ಮೇಲಿನ ನಿರ್ಬಂಧವನ್ನು 2020ರಿಂದ 2024ರ ಅವಧಿಯಲ್ಲಿ ಹಂತಹಂತವಾಗಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.