ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 25 ರನ್ ಅಂತರದ ಗೆಲುವು ದಾಖಲಿಸುವ ಮೂಲಕ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಶಿಪ್ ಫೈನಲ್ ತಲುಪಿದೆ. ಹಾಗೆ, ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.
ಎರಡನೇ ಇನ್ನಿಂಗ್ಸ್ನ ಬೌಲಿಂಗ್ನಲ್ಲಿ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಮಿಂಚಿದರು. ಇಬ್ಬರೂ ತಲಾ ಐದೈದು ವಿಕೆಟ್ ಗಳಿಸಿ ಸಂಭ್ರಮಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಅಕ್ಷರ್ ಪಟೇಲ್ 4 ವಿಕೆಟ್ ಕಬಳಿಸಿದ್ದರು.
ರಿಷಭ್ ಪಂತ್ ‘ಮ್ಯಾನ್ ಆಫ್ದ ಮ್ಯಾಚ್’ ಎನಿಸಿದರು, ರವಿಚಂದ್ರ ಅಶ್ವಿನ್ ‘ಮ್ಯಾನ್ ಆಫ್ ದ ಸೀರಿಸ್’ ಗೌರವಕ್ಕೆ ಪಾತ್ರರಾದರು.
ಮೊದಲು ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 205 ರನ್ ಗಳಿಗೆ ಅಲೌಟ್ ಆಗಿತ್ತು. ಬಳಿಕ ಭಾರತ ತಂಡವು ರಿಷಭ್ ಪಂತ್ (101), ವಾಷಿಂಗ್ಟನ್ ಸುಂದರ್ (ಅಜೇಯ 96) ಹಾಗೂ ರೋಹಿತ್ ಶರ್ಮಾ (49) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 365 ರನ್ ಪೇರಿಸಿತ್ತು.
ಈ ಮೂಲಕ 160 ರನ್ಗಳ ಬೃಹತ್ ಮುನ್ನಡೆ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ 135 ರನ್ ಗಳಿಗೆ ಸರ್ವಪತನ ಕಂಡಿತು.