ವರುಣನ ರುದ್ರಾವತಾರಕ್ಕೆ ಅವಳಿ ಜಿಲ್ಲೆ ತತ್ತರ: ಉಕ್ಕೇರಿರುವ ನದಿಗಳು; ಧರೆಗುರುಳುವ ಮರಗಳು; ಸಂಚಾರ ಅಸ್ತವ್ಯಸ್ಥ

ಮಂಗಳೂರು/ಉಡುಪಿ: ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಲೇಡಿ ಹಿಲ್ ಸರ್ಕಲ್ ಬಳಿ ಹಳೆಯದಾದ ಬೃಹತ್ ಆಲದ ಮರವೊಂದು ಉರುಳಿಬಿದ್ದಿದ್ದು, ಜನನಿಬಿಡ ಕೊಟ್ಟಾರ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಮರವನ್ನು ತೆರವುಗೊಳಿಸುವ ಕರ್ಯ ನಡೆದಿದೆ.

ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು, ಸದ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರು ಭೇಟಿ ನೀಡದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಕುಮಾರಧಾರಾ ನದಿಯ ದಡದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಪ್ರವಾಹದಿಂದಾಗಿ ಮುಳುಗಿದೆ.

Image: HT

ದೇವಸ್ಥಾನ ಭೇಟಿಯಲ್ಲಿರುವ ಭಕ್ತರು ನದಿಯ ಬಳಿ ಹೋಗದಂತೆ ಆಡಳಿತ ಮಂಡಳಿ ತಿಳಿಸಿದೆ. ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯೂ ಕುಮಾರಧಾರಾ ನೀರಿನಲ್ಲಿ ಮುಳುಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಶನಿವಾರ ಬೆಳಗ್ಗೆ 8:30ರಿಂದ ಭಾನುವಾರ ಬೆಳಗ್ಗೆ 8:30ರ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಕಾರ್ಕಳ ತಾಲೂಕಿನ ನೀರೆಯಲ್ಲಿ 355 ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜದಲ್ಲಿ 259 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ನದಿಗಳೆಲ್ಲಾ ಬಹುತೇಕ ಉಕ್ಕಿ ಹರಿಯುತ್ತಿದೆ.