ನಾಳೆ (ನ.21) ಉಚ್ಚಿಲದಲ್ಲಿ ನೂತನ ಭವ್ಯ “ಮೊಗವೀರ ಭವನ” ಉದ್ಘಾಟನೆ

ಉಡುಪಿ: ಉಚ್ಚಿಲದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ನೂತನ ಮೊಗವೀರ ಭವನದ ಉದ್ಘಾಟನಾ ಸಮಾರಂಭವು ನಾಳೆ (ನ. 21) ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕುಲಮಹಾಸ್ತ್ರೀ ಸಭಾಭವನವನ್ನು ಉದ್ಘಾಟಿಸುವರು.
ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೂತನ ಭವನವನ್ನು ಉದ್ಘಾಟಿಸುವರು. ಮಾಧವ ಮಂಗಲ ಸಭಾಭವನವನ್ನು ಸಚಿವ ವಿ.ಸುನಿಲ್ ಕುಮಾರ್, ‘ಶಾಲಿನಿ ನಾಡೋಜ ಡಾ. ಜಿ ಶಂಕರ್‌ ವೇದಿಕೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೀತಾ ಆನಂದ್ ಸಿ.ಕುಂದರ್‌ ವೇದಿಕೆಯನ್ನು ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ. ಶಂಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಕೆ. ರಘುಪತಿ ಭಟ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಉಡುಪಿ ದ.ಕ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಅವರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹರಿಯಪ್ಪ ಕೋಟ್ಯಾನ್, ಉದ್ಯಾವರ ಸದಿಯ ಸಾಹುಕಾರ್ ಮನೆತನದ ಪ್ರತಿನಿಧಿ ಯು. ಗಣೇಶ್, ಕುಂದಾಪುರ ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘದ ಶಾಖಾಧ್ಯಕ್ಷ ಕೆ.ಕೆ. ಕಾಂಚನ್, ಉಚ್ಚಿಲ ದ.ಕ. ಮೊಗವೀರ ಮಹಿಳಾ ಸಂಘದ ಅಧ್ಯಕ್ಷ ಅಪ್ಪಿ ಎಸ್, ಸಾಲ್ಯಾನ್, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಶಿವರಾಮ ಕೋಟ ಉಪಸ್ಥಿತರಿರುವರು.

ಸಭಾಭವನದ ವಿಶೇಷತೆ:
ಅತ್ಯುಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಭಾಭವನವನ್ನು ನಿರ್ಮಿಸಲಾಗಿದ್ದು, ಸಂಪೂರ್ಣ ಹವಾನಿಯಂತ್ರಿತವಾಗಿದೆ. ಎರಡು ವಿಶಾಲ ಸಭಾಂಗಣಗಳನ್ನು ಒಳಗೊಂಡಿದೆ. 1,100 ಮಂದಿಯ ಸಾಮರ್ಥ್ಯದ ಮಾಧವ ಮಂಗಲ ಸಭಾಂಗಣ ಹಾಗೂ ಕುಲಮಹಾಸ್ತ್ರಿ ಸಭಾಂಗಣ 900 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಸಸ್ಯಾಹಾರ ಮತ್ತು ಮಾಂಸಹಾರದ ಪ್ರತ್ಯೇಕ ಅಡುಗೆ ಕೋಣೆಗಳು ಹಾಗೂ ವಿಶಾಲ ಭೋಜನ ಗೃಹ ಇದೆ. ಅತ್ಯಾಧುನಿಕ ಲಿಫ್ಟ್, ಜನರೇಟರ್, ಸಿಸಿಟಿವಿ ಕಣ್ಗಾವಲು ಹಾಗೂ ಏಕಕಾಲದಲ್ಲಿ 550 ಕಾರು ನಿಲುಗಡೆ ಸಾಮರ್ಥ್ಯದ ವಿಶಾಲ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದೆ. ಉಚ್ಚಿಲ ಮಹಾಲಕ್ಷ್ಮೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಬ್ರಹ್ಮಕಲಶೋತ್ಸವ ನೆರವೇರಲಿದೆ.

ಎಲ್ಲ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಶುಭಸಮಾರಂಭಗಳನ್ನು ನಡೆಸಲು ಅತ್ಯಾಧುನಿಕ‌ ಸೌಕರ್ಯಗಳನ್ನು ಒಳಗೊಂಡ ಸಭಾಭವನ ನಿರ್ಮಾಣ ಮಾಡಬೇಕೆಂಬ ಆಶಯವನ್ನು ಸಂಘ ಹೊಂದಿತ್ತು. ಅದರಂತೆ ಸಮಾಜದ ಮಾರ್ಗದರ್ಶಕ ಡಾ. ಜಿ.ಶಂಕರ್ ನೇತೃತ್ವದಲ್ಲಿ ದ ಕ. ಮೊಗವೀರ ಮಹಾಜನ ಸಂಘ ಉಚ್ಚಿಲ, ಎಂಆರ್‌ಪಿಎಲ್‌ ಕಾರ್ಪೊರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನಿಷಿಯೇಟಿವ್ ಸಹಯೋಗದೊಂದಿಗೆ ಸಮಾಜದ ಹಿರಿಯರಾದ ಉದ್ಯಾವರದ ದಿ.ಸದಿಯ ಸಾಹುಕಾರ್‌ ಅವರು ದೇವಸ್ಥಾನಕ್ಕೆ ನೀಡಿದ 14 ಎಕರೆ ಜಾಗದಲ್ಲಿ ಈ ಭವ್ಯ ಸಭಾಭವನವನ್ನು ನಿರ್ಮಿಸಲಾಗಿದೆ.