ಜುಲೈ 5ರಂದು ಬ್ರಹ್ಮಾವರದಲ್ಲಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 5ನೇ ಶಾಖೆ ಉದ್ಘಾಟನೆ

ಬ್ರಹ್ಮಾವರ: ಕ್ಷೌರಿಕರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಸ್ಥಾಪಿಸಿರುವ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 5ನೇ ಶಾಖೆಯು ಜು. 5 ರಂದು ಬ್ರಹ್ಮಾವರ ಸೈಂಟ್ ಅಂತೋನಿ ಪ್ರೆಸ್‌ ಕಟ್ಟಡದ ಮೊದಲನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಈ ಕುರಿತು ಸಹಕಾರಿ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಮಾಹಿತಿ ನೀಡಿದರು.

ಸಹಕಾರಿಯು ಉಡುಪಿ, ಕಾರ್ಕಳ, ಕುಂದಾಪುರ ಹಾಗೂ ಕಾಪುವಿನಲ್ಲಿ ಶಾಖೆಯನ್ನು ಹೊಂದಿದೆ‌. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್. ಕೃಷ್ಣ ರೆಡ್ಡಿ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಬಾರ್ಕೂರು ಕಚ್ಚೂರು ಶ್ರೀನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ಭಂಡಾರಿ ಕಡಂದಲೆ ಸೆಲೂನ್ ಸಾಮಾಗ್ರಿ ಮಳಿಗೆ ಉದ್ಘಾಟಿಸಲಿದ್ದಾರೆ.

ಉಡುಪಿ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಭದ್ರತಾ ಕೋಶ ಉದ್ಘಾಟಿಸಲಿದ್ದಾರೆ ಎಂದರು.

ಬ್ರಹ್ಮಾವರ ಬಂಟರ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಪ್ರಸ್ತಾವನೆಯನ್ನು ಮಾತನಾಡಲಿದ್ದಾರೆ.

ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟ ಅಧ್ಯಕ್ಷ ಭಾಸ್ಕರ ಕಾಮತ್, ಸವಿತಾ ವಿವಿಧೋದ್ದೇಶ ಸಹಕಾರ ಸಂಘ ಶಿಕಾರಿಪುರ ಸ್ಥಾಪಕಾಧ್ಯಕ್ಷ ವೆಂಕಟೇಶ್ ಶಿಕಾರಿಪುರ, ದ.ಕ. ಜಿಲ್ಲಾ ಸವಿತಾ ಸಮಾಜ ಸೌಹಾರ್ದ ಸಹಕಾರಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಂಟ್ವಾಳ, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು ಸಹಿತ ಗಣ್ಯರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್ ಭಂಡಾರಿ ನಿಂಜೂರು, ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಬ್ರಹ್ಮಾವರ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಶಿವರಾಮ ಭಂಡಾರಿ ಹಂದಾಡಿ, ಸಹಕಾರಿ ಮುಖ್ಯ ಕಾರ್ಯನಿರ್ವಹಣಾಕಾರಿ ಮಾಲತಿ ಅಶೋಕ್ ಭಂಡಾರಿ ಉಪಸ್ಥಿತರಿದ್ದರು.