ಮಣಿಪಾಲ: ಎಸ್ಸಿಡಿಸಿಸಿ ಬ್ಯಾಂಕ್ ನ 111ನೇ ನೂತನ ಶಾಖೆಯು ಇದೇ ಬರುವ ಮೇ 2ರಂದು ಮಣಿಪಾಲದ ಕಮರ್ಷಿಯಲ್ ಕಾಂಪ್ಲೆಕ್ಸ್ನ ನೆಲ ಅಂತಸ್ತಿನಲ್ಲಿ ಕಾರ್ಯಾರಂಭಗೊಳ್ಳಲಿದೆ. ಇದು ಸಂಪೂರ್ಣ ಗಣಕೀಕೃತಗೊಂಡ ಹವಾನಿಯಂತ್ರಿತ ಶಾಖೆಯಾಗಿದ್ದು, ಆರ್ಟಿಜಿಎಸ್, ನೆಫ್ಟ್, ಎಟಿಎಂ ಹಾಗೂ ಕೋರ್ ಬ್ಯಾಂಕಿಂಗ್ ಸೌಲಭ್ಯವನ್ನು ಒಳಗೊಂಡಿದೆ ಎಂದು ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.
ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 2ರಂದು ಬೆಳಿಗ್ಗೆ 10.30ಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ನಡೆಯುವ ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಈ ಸಮಾವೇಶದಲ್ಲಿ 15000 ಮಹಿಳೆಯರು ಭಾಗವಹಿಸಲಿದ್ದಾರೆ. ಮಣಿಪಾಲ ಟೈಗರ್ ಸರ್ಕಲ್ ನಿಂದ ಎಂ.ಐ.ಟಿ. ಕಾಲೇಜು ಎದುರುಗಡೆಯ ಮೈದಾನದವರೆಗೆ ಭವ್ಯ ಮೆರವಣಿಗೆ ಜರುಗಲಿದೆ. ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಹಾಗೂ ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಇಂಧನ ಸಚಿವ ವಿ. ಸುನಿಲ್ ಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಕೆ. ರಘುಪತಿ ಭಟ್, ಹಿಂದುಳಿದ ವರ್ಗಗಳ ಯೋಜನಾ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಉದ್ಯಮಿ ನಾಡೋಜ ಜಿ. ಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿವರು ಎಂದು ಹೇಳಿದರು.
2007ರಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಜಾರಿಗೊಳಿಸಿರುವ ‘ಗ್ರಾಹಕರ ಮನೆ ಬಾಗಿಲಿಗೆ ಮೊಬೈಲ್ ಬ್ಯಾಂಕಿಂಗ್ ‘ ಯೋಜನೆಯನ್ನು ಉಡುಪಿ ಜಿಲ್ಲೆಗೆ ವಿಸ್ತರಣೆ ಮಾಡುವ ಕಾರ್ಯಕ್ಕೂ ಆ ದಿನದಂದು ಚಾಲನೆ ಸಿಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ನಿರ್ದೇಶಕ ಜಯಕರ್ ಶೆಟ್ಟಿ ಇಂದ್ರಾಳಿ, ನಿರ್ದೇಶಕರಾದ ರಾಜು ಪೂಜಾರಿ, ಅಶೋಕ್ ಶೆಟ್ಟಿ ಕುಕ್ಕೆಹಳ್ಳಿ, ಮಹೇಶ್ ಹೆಗ್ಡೆ ಮೊಳಹಳ್ಳಿ, ರಾಜೇಶ್ ರಾವ್ ಪಾಂಗಾಳ ಉಪಸ್ಥಿತರಿದ್ದರು.